ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಬುಧವಾರ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ಬುಧವಾರ ನಡೆದ ಸರಳ ಸಮಾರಂಭಲ್ಲಿ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರಿಂದ ಬಸವರಾಜ ಬೊಮ್ಮಾಯಿ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸುವುದಕ್ಕೂ ಮುನ್ನ ತಮ್ಮ ರಾಜಕೀಯ ಗುರು ಬಿಎಸ್ ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ ಬಸವರಾಜ್ ಬೊಮ್ಮಾಯಿ ವೇದಿಕೆ ಏರಿದರು. ಈ ಮೂಲಕ ಬೊಮ್ಮಾಯಿ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದರು. ಅಲ್ಲದೇ ರಾಜ್ಯದಲ್ಲಿ ತಂದೆ ನಂತರ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಎರಡನೇ ನಾಯಕ ಎಂಬ ಗೌರವಕ್ಕೆ ಪಾತ್ರರಾದರು. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಂತರ ಪುತ್ರ ಎಚ್.ಡಿ. ಕುಮಾರಸ್ವಾಮಿ ಸಿಎಂ ಸ್ಥಾನ ಅಲಂಕರಿಸಿದ್ದರು.
ಸಿಎಂ ಆಗಿ ಬಸವರಾಜ ಬೊಮ್ಮಾಯಿಯವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ ಸಿಎಂ ಕೊಠಡಿಯ ನಾಮಫಲಕ ಬದಲಾಗಿದೆ. ನಿನ್ನೆಯವರೆಗೆ ಬಿ ಎಸ್ ಯಡಿಯೂರಪ್ಪನವರ ಹೆಸರು ಇದ್ದರೆ ಇಂದು ಬಸವರಾಜ ಬೊಮ್ಮಾಯಿ ಸಿಎಂ ಎಂದು ನಾಮಫಲಕ ಅಲಂಕೃತಗೊಂಡಿದೆ.