ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಕದಿರೇಶ್ ಅಕ್ಕ ಮಾಲಾಳನ್ನು ಪೊಲೀಸರು ಬಂಧಿಸುವ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಲಭಿಸಿದೆ.
ಕದಿರೇನಹಳ್ಳಿ ಪೊಲೀಸರು ಮಾಲಾ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ. ಕದಿರೇಶ್ ಅಕ್ಕ ಮಾಲಾಳನ್ನು ಬಂಧಿಸಿರುವ ಪೊಲೀಸರು ಸತತವಾಗಿ ವಿಚಾರಣೆ ನಡೆಸುತ್ತಿದ್ದು, ಈಕೆಯೇ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ.
ಕೌಟುಂಬಿಕ ಜಗಳ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಗೆ ಮಗ ಅಥವಾ ಸೊಸೆಯನ್ನು ಕಣಕ್ಕಿಳಿಸಲು ಉದ್ದೇಶಿಸಿದ್ದ ಮಾಲಾ, ರೇಖಾಳ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾಲಾ ಈ ಹಿಂದೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಕೂಡ ಆಗಿದ್ದು, ಮಾಲಾಳನ್ನು ನಿರಂತರ ವಿಚಾರಣೆ ನಡೆಸುತ್ತಿರುವ ಪೊಲೀಸರು ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ರೇಖಾ ಹತ್ಯೆಗೆ 15 ದಿನಗಳಿಂದ ಚರ್ಚೆ ನಡೆದಿದ್ದು, 3 ದಿನಗಳ ಹಿಂದೆ ಸಂಚು ರೂಪಿಸಲಾಗಿತ್ತು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಜವಾಬ್ದಾರಿ ನೀಡಲಾಗಿತ್ತು. ಒಬ್ಬ ಹಿಂದಿನಿಂದ ಇರಿದರೆ, ಮತ್ತೊಬ್ಬ ಹಿಂದಿನಿಂದ ಹಲ್ಲೆ ಮಾಡಿದ್ದ. ಮತ್ತೊಬ್ಬ ಕೊಲೆ ವೇಳೆ ಯಾರೂ ಅಡ್ಡ ಬರದಂತೆ ತಡೆಯಬೇಕಿದ್ದರೆ ಮತ್ತೊಬ್ಬ ಎಲ್ಲವನ್ನೂ ಗಮನಿಸುತ್ತಿರಲು ಸೂಚಿಸಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.