ಬೆಂಗಳೂರು ವಕೀಲರ ಸಂಘದ (ಎಎಬಿ) ಕಾರ್ಯಕಾರಿ ಸಮಿತಿಗೆ ಡಿಸೆಂಬರ್ 22ರೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ.
ಕಳೆದ ಸೆ.4ರಂದು ಸಂಘದ ಆಡಳಿತ ನಿರ್ವಹಣೆಗೆ ನಗರ ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿ ಆಗಿ ನೇಮಿಸಿದ್ದ ಸಹಕಾರ ಇಲಾಖೆ ಆದೇಶ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಚುನಾವಣೆ ನಡೆಸಲು ಎನ್.ಎಸ್. ಸತ್ಯನಾರಾಯಣ ಗುಪ್ತ ಅವರ ಅಧ್ಯಕ್ಷತೆಯಲ್ಲಿ ಏಳು ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ಕೂಡ ರಚನೆ ಮಾಡಿದೆ. ನ್ಯಾಯಾಲಯ ರಚಿಸಿರುವ ಉನ್ನತ ಮಟ್ಟದ ಸಮಿತಿ 2021ರ ಡಿ.2ರೊಳಗೆ ಎಎಬಿ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಬೇಕು.
ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ಚುನಾವಣೆಗೆ ಬೆಂಗಳೂರು ವಕೀಲರ ಸಂಘದ ಹಾಲಿ ಕಾರ್ಯಕಾರಿ ಸಮಿತಿ ಸಹಕಾರ ನೀಡಬೇಕು. ಚುನಾವಣೆಗೆ ಅನುಕೂಲವಾಗುವಂತೆ ಸಿಸಿಟಿವಿ ಅಳವಡಿಸಬಹುದು.
ಚುನಾವಣೆ ಪ್ರಕ್ರಿಯೆಯ ಫೋಟೋಗ್ರಾಫ್ ಮತ್ತು ವಿಡಿಯೋಗ್ರಾಫ್ ಮಾಡಬಹುದು. ರಾಜ್ಯ ಸರ್ಕಾರ ಭದ್ರತೆಗೆ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ಒದಗಿಸಬೇಕು. ಚುನಾವಣೆವರೆಗೂ ಹಾಲಿ ಬೆಂಗಳೂರು ಕಾರ್ಯಕಾರಿ ಸಮಿತಿ ಸೀಮಿತ ಅಧಿಕಾರದೊಂದಿಗೆ ತಾತ್ಕಾಲಿಕವಾಗಿ ಕೆಲಸ ಮಾಡಬಹುದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.