ಬೆಂಗಳೂರು : ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ರೈತರು ನಡೆಸುತ್ತಿರು ಹೋರಾಟ ಭಾಗವಾಗಿ ನಾಳೆ ರಸ್ತೆ ಸಂಚಾರ ಬಂದ್ ಚಳುವಳಿ ಹಮ್ಮಿಕೊಂಡಿದ್ದು, ಇದರಿಂದ ರಾಜ್ಯದ ಬಹುತೇಕ ರಸ್ತೆಗಳ ಬಂದ್ ಆಗಲಿವೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲಿನ ಕೇಂದ್ರ ಸರ್ಕಾರದ ದೌರ್ಜನ್ಯ ಖಂಡಿಸಿ ಶನಿವಾರ ರಾಜ್ಯದ ರೈತರು ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ರಾಜ್ಯಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ತಡೆ ಚಳುವಳಿ ಹಮ್ಮಿಕೊಂಡಿವೆ.
ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ, ಹಾಗೂ ದೇಶದ ರಾಜಧಾನಿಯಲ್ಲಿ ನಡೆಸುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ರಾಜ್ಯದ ರೈತರು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯದ ಹೆದ್ದಾರಿಗಳನ್ನು ಬಂದ್ ಮಾಡಲು ಮುಂದಾಗಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿ ಶನಿವಾರ ಮದ್ಯಾಹ್ನ 12 ರಿಂದ 2 ಗಂಟೆ ತನಕ ರಸ್ತೆ ತಡೆ ನಡೆಸಲಾಗುವುದು ಎಂದು ಕುರುಬನೂರು ಶಾಂತಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದರಿಂದ ಜನರಿಗೆ ಯಾವುದೇ ತೊಂದರೆಯುಂಟಾಗುವುದಿಲ್ಲ, ಈ ಸಮಯದಲ್ಲಿ ನಮಗೆ ಬೆಂಬಲ ನೀಡಿ, ನಮ್ಮ ಹೋರಾಟವನ್ನು ಬೆಂಬಲಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದ ಬಹುತೇಕ ರಸ್ತೆಗಳು ಬಂದ್ ಆಗಲಿದ್ದು, ಈ ಹೋರಾಟವು ರೈತರ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಇದಕ್ಕೆ ರೈತರು, ರೈತರ ಪರ ಕಾಳಜಿಯ ಉಳ್ಳವರು ಸಾಥ್ ನೀಡಿ ಅಂತ ಮನವಿ ಮಾಡಿದ್ದಾರೆ.