Aero India 2021: ನಾಳೆಯಿಂದ 13ನೇ ಆವೃತ್ತಿಯ ಏರ್ ಶೋ ಆರಂಭ

ಬೆಂಗಳೂರು: ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಕಲರವಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಾಳೆಯಿಂದ ಫೆ.5 ವರೆಗೆ ವೈಮಾನಿಕ ಪ್ರದರ್ಶನಕ್ಕೆ ನಡೆಯಲಿದೆ. ಎಲ್ಲರ ಚಿತ್ತ ಈಗ ಬೆಂಗಳೂರಿನ ಯಲಹಂಕ ವಾಯುನೆಲೆಯತ್ತ ನೆಟ್ಟಿದೆ. ಏರ್ಶೋಗೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. 13ನೇ ಆವೃತ್ತಿಯ ಏರ್ಶೋ ನಲ್ಲಿ 41 ಯುದ್ದ ವಿಮಾನಗಳು ಪಾಲ್ಗೊಳ್ಳಲಿವೆ.
ವೈಮಾನಿಕ ಪ್ರದರ್ಶನ ನೀಡುವುದಕ್ಕೆ ಕೊನೆಯ ಹಂತದ ತಾಲೀಮು ಕೂಡ ಇಂದು ನಡೆದಿದೆ. ನಾಳೆ ಬೆಳಗ್ಗೆ 9:30ಕ್ಕೆ 13ನೇ ಆವೃತ್ತಿಯ ಏರ್ಶೋವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ನಾಳಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಎಎಲ್ನ ಆತ್ಮನಿರ್ಭರ ಫಾರ್ಮೇಶನ್ ಫ್ಲೈಟ್ ವೈಮಾನಿಕ ಪ್ರದರ್ಶನ ನಡೆಯಲಿದೆ. ಹುಟ್ಟು, ಸ್ವದೇಶಿ, ಸಹಭಾಗಿತ್ವ ಎಂಬ ಥೀಮ್ ಅಡಿಯಲ್ಲಿ ಆತ್ಮನಿರ್ಭರ ಫಾರ್ಮೇಶನ್ ಪ್ಲೈಟ್ ವೈಮಾನಿಕ ಪ್ರದರ್ಶನ ನಡೆಯುವುದು ಈ ಬಾರಿಯ ವಿಶೇಷವಾಗಿದೆ.
ಇನ್ನೂ ಪ್ರತಿವರ್ಷ 5 ದಿನಗಳ ಕಾಲ ಏರ್ ಶೋ ನಡೆಯುತ್ತಿತ್ತು. ಆದರೆ, ಕೊರೋನಾ ಹಿನ್ನಲೆ ಈ ಬಾರಿ 3 ದಿನಕ್ಕೆ ಸೀಮಿತಗೊಳಿಸಲಾಗಿದ್ದು, ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಪ್ರತಿದಿನದ ಪ್ರವೇಶದ ಮಿತಿ 15 ಸಾವಿರ ಆಗಿದ್ದು, ಡಿಸ್ಪ್ಲೇ ಏರಿಯಾದಲ್ಲಿ ಪ್ರತಿದಿನ ಕೇವಲ 3 ಸಾವಿರ ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ಕೋವಿಡ್ ಟೆಸ್ಟ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರಿಗಷ್ಟೆ ಪ್ರವೇಶ ಇದ್ದು, ಉಳಿದವರು ಏರೋ ಇಂಡಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಏರ್ ಶೋವನ್ನು ವೀಕ್ಷಿಸಬಹುದಾಗಿದೆ.