ಬಿಡದಿ ಟೊಯೋಟಾ ಘಟಕದ ವಿವಾದ ಶೀಘ್ರವೇ ಇತ್ಯರ್ಥ: ಸಚಿವ ಶಿವರಾಮ್ ಹೆಬ್ಬಾರ್

ರಾಮನಗರ: ಬಿಡದಿ ಟೊಯೋಟಾ ಕಾರು ತಯಾರಿಕಾ ಘಟಕದ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವಿನ ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಸಚಿವರು, ನಾನೇ ಖುದ್ದಾಗಿ ಬಿಡದಿ ಟೊಯೋಟಾ ಘಟಕಕ್ಕೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸಿ ವಿವಾದ ಬಗೆಹರಿಸಲು ಮುಂದಾಗಿದ್ದೆ. ಈ ಬಗ್ಗೆ ಮಾತನಾಡಲು ಕಾರ್ಮಿಕ ಮುಖಂಡರನ್ನು ಸಭೆಗೆ ಆಹ್ವಾನಿಸಿದ್ದೆ. ಆದರೆ ಕಾರ್ಮಿಕ ಮುಖಂಡರು ಸಭೆಗೆ ಹಾಜರಾಗಲೇ ಇಲ್ಲ ಎಂದಿದ್ದಾರೆ.
ಸದ್ಯ 3415 ಕಾರ್ಮಿಕರ ಪೈಕಿ 1896 ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. ಈ ವಿವಾದವನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಕಳೆದ ಭಾನುವಾರ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರತಿಭಟನೆ ನಡೆಸುವ ಕಾರ್ಮಿಕರನ್ನು ಭೇಟಿ ಮಾಡಿ ಅಹವಾಲುಗಳನ್ನು ಸ್ವೀಕರಿಸಿದ್ದರು.