ನವದೆಹಲಿ: ಕೊರೋನಾ ಸೋಂಕು ಹರಡುವಿಕೆಯ ಆತಂಕದ ನಡುವೆಯೇ ದೇಶಾದ್ಯಂತ ಹಕ್ಕಿಜ್ವದ ಭೀತಿ ಹೆಚ್ಚಾಗತೊಡಗಿದೆ. ಒಟ್ಟು 12 ರಾಜ್ಯಗಳಲ್ಲಿ ಪಕ್ಷಿಗಳಿಗೆ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ವಲಸೆ ಹಕ್ಕಿಗಳಲ್ಲೂ ಜ್ವರ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಮಹಾರಾಷ್ಟ್ರ, ಗುಜರಾತ್, ಛತ್ತೀಸ್ ಘಡ, ಉತ್ತರಾಖಂಡ, ಕೇರಳ, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಜಮ್ಮು ಕಾಶ್ಮೀರ ಮತ್ತು ಪಂಜಾಬ್ ರಾಜ್ಯಗಳಲ್ಲಿ ಹಕ್ಕಿಜ್ವರದ ಭೀತಿ ಹೆಚ್ಚಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಕೋಳಿಗಳನ್ನು ಹೊರತುಪಡಿಸಿ ಬೇರೆ ಪಕ್ಷಿಗಳಲ್ಲೂ ಸಹ ಹಕ್ಕಿಜ್ವರ ಕಾಣಿಸಿಕೊಂಡಿದೆ.
ನವಿಲು, ಕಾಗೆ ಸೇರಿದಂತೆ ಹಲವು ಬಗೆಯ ವಲಸೆ ಪಕ್ಷಿಗಳಲ್ಲಿ ಸಹ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಹಕ್ಕಿಜ್ವರ ನಿಯಂತ್ರಣಕ್ಕೆ ಕಾರ್ಯಾಚರಣೆ ಆರಂಭವಾಗಿದೆ. ಸೋಂಕಿನ ಪ್ರಮಾಣ ಹೆಚ್ಚಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು, ಹಕ್ಕಿಜ್ವರ ಕಾಣಿಸಿಕೊಂಡ ಕೋಳಿ ಮತ್ತು ಮೊಟ್ಟೆಗಳನ್ನು ವಿಲೇವಾರಿ ಮಾಡುವ ಕಾರ್ಯ ಮಹಾರಾಷ್ಟ್ರದಲ್ಲಿ ಭರದಿಂದ ಸಾಗಿದೆ. ಇದರಿಂದ ನಷ್ಟದಲ್ಲಿರುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವನ್ನು ಸಹ ಘೋಷಿಸಿವೆ.
ಮಹಾರಾಷ್ಟ್ರದ ಭೀಡ್ ಜಿಲ್ಲೆಯಲ್ಲಿ ಗಂಡು ನವಿಲುಗಳ ಮೃತದೇಹಗಳು ಪತ್ತೆಯಾಗಿದ್ದು ಪಶುಪಾಲನಾ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟು ತೆರವು ಕಾರ್ಯಾಚರಣೆಯನ್ನು ಮಾಡಿದ್ದಾರೆ. ಇನ್ನು ಪಕ್ಕದ ಕೇರಳದಲ್ಲಿ ಹಕ್ಕಿಜ್ವರದ ಭೀತಿ ಹೆಚ್ಚಾದ ಕಾರಣ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನೆರೆ ರಾಜ್ಯಗಳಿಂದ ಹಕ್ಕಿಜ್ವರ ಹರಡದಂತೆ ಕಟ್ಟುನಿಟ್ಟಿನ ಸೂಚನೆ ಪಾಲಿಸಬೇಕೆಂದು ಪಶುಸಂಗೋಪನಾ ಇಲಾಖೆ ಆದೇಶಿಸಿದೆ.