ಹುಟ್ಟುಹಬ್ಬ ಆಚರಣೆ ವೇಳೆ ಮನೆಯ ಮೇಲ್ಛಾವಣಿ ಕುಸಿದು ಇಬ್ಬರು ಮೃತಪಟ್ಟು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ತಾಜ್ನಗರಿಯ ದಂಡುಪುರದಲ್ಲಿ ಸಂಭವಿಸಿದೆ.
ಸೋಮವಾರ ರಾತ್ರಿ ನಡೆದ ಈ ಘಟನೆಯಲ್ಲಿ ಬದನ್ ಸಿಂಗ್ ನಾಗಲಾ ಟೀನ್ (21) ಮತ್ತು ಸುರೇಂದ್ರ ಸಿಂಗ್ (24) ಮೃತ ದುರ್ದೈವಿಗಳು.
ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವಶೇಷಗಳಡಿ ಸಿಲುಕಿದ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಂಡುಪುರದ ನಿವಾಸಿ ಉದ್ಯಮಿ ಸೋನು ವರ್ಮಾ ಅವರ ಮನೆಯಲ್ಲಿ ದುರಸ್ತಿ ಕೆಲಸ ನಡೆಯುತ್ತಿತ್ತು. ಈ ಮಧ್ಯೆ ಅನಿಕೇತ್ ಚೌಧರಿ ಎಂಬವರ ಹುಟ್ಟುಹಬ್ಬದ ಸಂತೋಷಕೂಟವನ್ನು ಸೋಮವಾರ ರಾತ್ರಿ ಮನೆಯ ಎರಡನೇ ಮಹಡಿಯಲ್ಲಿ ಆಯೋಜಿಸಲಾಗಿದ್ದು, ಸುಮಾರು 50 ರಿಂದ 60 ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಡಿಜೆ ಹಾಡಿಗೆ ಎಲ್ಲರೂ ಡ್ಯಾನ್ಸ್ ಮಾಡಲು ಮುಂದಾದಾಗ ಇದ್ದಕ್ಕಿದ್ದಂತೆ ಎರಡನೇ ಮಹಡಿ ಕುಸಿದು ಬಿದ್ದಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಹೊರತೆಗೆದಿದ್ದಾರೆ.
ರಕ್ಷಣಾ ಕಾರ್ಯ ನಡೆಯುತ್ತಿದ್ದು, ಗಾಯಾಳುಗಳನ್ನು ಎಸ್ಎನ್ ವೈದ್ಯಕೀಯ ಕಾಲೇಜು ಸೇರಿದಂತೆ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಆಗ್ರಾ ಡಿಎಂ ಪ್ರಭು ನಾರಾಯಣ್ ಸಿಂಗ್ ತಿಳಿಸಿದ್ದಾರೆ.