ಅಭಿವೃದ್ಧಿ ಕೆಲಸ ಬಿಟ್ಟು ಮದುವೆಗಳಿಗೆ ಹೋದ್ರೆ ಕೆಲಸ ಆಗಲ್ಲ: ಪ್ರಜ್ವಲ್ಗೆ ಪ್ರೀತಂ ಗೌಡ ವ್ಯಂಗ್ಯ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಲೋಕಸಭೆಗೆ ಹೋಗಿ ಮಾತನಾಡಲು ಜಿಲ್ಲೆಯ ಜನ ಆಯ್ಕೆ ಮಾಡಿದ್ದಾರೆ, ಅವರು ಜಿಲ್ಲೆಗೆ ಏನು ಬೇಕು, ಸಮಸ್ಯೆ ಏನು ಎಂಬ ಬಗ್ಗೆ ಬೆಳಕು ಚೆಲ್ಲಬೇಕಿತ್ತು. ಅದನ್ನು ಬಿಟ್ಟು ಇಲ್ಲಿ ಬೀಗರ ಊಟ, ಮದುವೆ ಸಮಾರಂಭ ಮಾಡಿಕೊಂಡು ಕೂತರೆ ಕೆಲಸ ಆಗಲ್ಲ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಬಜೆಟ್‌ನಲ್ಲಿ ಹಾಸನ ಜಿಲ್ಲೆಯ ಕಡೆಗಣನೆಗೆ ಬಗ್ಗೆ ನಿಮ್ಮ ಹಾಗೆ ನನಗೂ ಹತಾಶೆ ಆಗಿದೆ. ಸಂಸತ್ತಿನಲ್ಲಿ ಪ್ರಜ್ವಲ್ ರೇವಣ್ಣ ಹಾಜರಾತಿ ನೋಡಿದರೆ ಕಡೆಯಿಂದ ಎರಡನೆಯವರೋ, ಮೂರನೆಯವರೋ ಇರಬೇಕು ಸಂಸತ್ ಅಧಿವೇಶನದಲ್ಲಿ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯ, ಸಮಸ್ಯೆಗಳ ಬಗ್ಗೆ ಪ್ರಧಾನಮಂತ್ರಿ ಗಮನ ಸೆಳೆಯಬೇಕಿತ್ತು. ಅದನ್ನು ಬಿಟ್ಟು ಪ್ರತಿನಿತ್ಯ ಹಾಸನ ಜಿಲ್ಲೆಯಲ್ಲಿ ಮದುವೆ, ಬೀಗರ ಊಟ ಮಾಡಿಕೊಂಡು ಕುಳಿತರೆ ಏನು ಸಿಗುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಕಾರ್ಯವೈಖರಿ ಬಗ್ಗೆ ಟೀಕಿಸಿದರು.
ಅವರು ಯುವಕರಿದ್ದಾರೆ, ಉತ್ತವಾಗಿ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ಜಿಲ್ಲೆಯ ಜನರಿಗೆ ಇತ್ತು. ಇನ್ನಾದರೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮಾರ್ಗದರ್ಶನ ಪಡೆದು ಕೆಲಸ ಮಾಡಲಿ ಎಂದರು.
ಮತದಾರರ ನೀರಿಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರಿಂದ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಐದು ಪಂಚಾಯ್ತಿಗಳಲ್ಲಿ ಪ್ರತಿಸ್ಪರ್ಧಿ ಇಲ್ಲದೆ ಬಿಜೆಪಿ ಅಧಿಕಾರ ಹಿಡಿದಿದ್ದು ಜೆಡಿಎಸ್ ಭದ್ರಕೋಟೆ ಎಂದು ಹಾಕಿದ್ದ ಬೇಲಿ ಕಳಚಿ ಬಿದ್ದಿದೆ. ಮುವತ್ತು-ನಲವತ್ತು ವರ್ಷಗಳಿಂದ ಯಾವ ಪಕ್ಷಕ್ಕೂ ಸಿಗದ ಅಧಿಕಾರ ಈಗ ಬಿಜೆಪಿ ಪಕ್ಷಕ್ಕೆ ದೊರೆತಿದೆ. ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರಿಂದ ಜಯ ಸಿಕ್ಕಿದೆ. ಐದು ಪಂಚಾಯ್ತಿಗಳಲ್ಲಿ ಒಂದು ಪಂಚಾಯ್ತಿಯಲ್ಲು ಪ್ರತಿಸ್ಪರ್ಧಿಯೇ ಇಲ್ಲ, ಜೆಡಿಎಸ್ ನ ಒಬ್ಬರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ, ನಾಮಪತ್ರ ಸಲ್ಲಿಸದ ಪರಿಸ್ಥಿತಿ ಜೆಡಿಎಸ್ ಗೆ ಬಂದಿದೆ ಸಾಲಗಾಮೆ ಹೋಬಳಿಯ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜಿಲ್ಲೆಯ ಹೆಡ್ ಕ್ವಾರ್ಟರ್ ಹಾಸನದಲ್ಲಿ ಬಿಜೆಪಿ ಗೆದ್ದಿರುವುದು ಆಕಸ್ಮಿಕ ಪ್ರೀತಂಗೌಡ ಆಕಸ್ಮಿಕ ಶಾಸಕ, ಇನ್ನು ಕೂಸು ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಜರಿದಿದ್ದರು. ಸಾಲಗಾಮೆ ಜನತೆ ಇದಕ್ಕೆ ತಕ್ಕ ಉತ್ತರ ಕೊಟ್ಟಿದ್ದು, ಹಾಸನ ಜೆಡಿಎಸ್ ಭದ್ರಕೋಟೆ ಎಂದು ಬೇಲಿ ಹಾಕಿಕೊಂಡಿದ್ದರು ಅದು ಈಗ ಕಳಚಿ ಬಿದ್ದಿದೆ. ಜೆಡಿಎಸ್ ಪಕ್ಷದವರು ಸರ್ವಾಧಿಕಾರಿ ಧೋರಣೆ ತೋರಿದ್ದರು, ನಾವು ಇದೇ ರೀತಿ ಮಾಡಿದರೆ ಮುಂದೆ ನಮಗೂ ಅದೇ ಪರಿಸ್ಥಿತಿ ಬರುತ್ತದೆ, ಹಾಗಾಗಿ ಜನರ ಅಪೇಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.