ಬಡವರ ಚಿತ್ತ ಕೇಂದ್ರದತ್ತ: ಸೀತಾರಾಮನ್ ಹ್ಯಾಟ್ರಿಕ್ ಬಜೆಟ್ ಮೇಲೆ ಹೆಚ್ಚಾದ ನಿರೀಕ್ಷೆ:

ಬೆಂಗಳೂರು: ಕೊರೊನಾ ಸಂಕಷ್ಟ, ಜಿಡಿಪಿ ಕುಸಿತದ ಸಮಯದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ (ಇಂದು) ಪೂರ್ವಾಹ್ನ 11 ಗಂಟೆಗೆ 2021–22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದು, ಬಜೆಟ್ ಮೇಲೆ ದೇಶದ ಜನಸಾಮಾನ್ಯರ ನಿರೀಕ್ಷೆ ಹೆಚ್ಚಾಗಿದೆ.
ದೇಶದಲ್ಲಿ ಕೊರೊನಾದಿಂದ ಜನ ಸಾಮಾನ್ಯರು ಬಸವಳಿದಿರುವ ಸಮಯದಲ್ಲಿ ದೇಶದ ಆರ್ಥಿಕತೆಗೆ ಈ ಬಜೆಟ್ ಪುನಶ್ಷೇತನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಎಂದಿನ ಸಂಪ್ರದಾಯವನ್ನು ಮುರಿದು ಈ ಬಾರಿ ಕಾಗದ ರಹಿತ ಬಜೆಟ್ ಮಂಡನೆಯಾಗಲಿದೆ. ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಎರಡನೇ ಅವಧಿಯ ಮೂರನೆ ಬಜೆಟ್ ಇದಾಗಲಿದೆ. ಅಲ್ಲದೆ, ಹಣಕಾಸು ಸಚಿವೆಯಾಗಿ ಇದು ನಿರ್ಮಲಾ ಸೀತಾರಾಮ್ ಮಂಡಿಸುವ ಹ್ಯಾಟ್ರಿಕ್ ಬಜೆಟ್ ಸಹ ಇದಾಗಲಿದೆ.
ಕೊರೊನಾ ನಂತರ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿದ್ದರಿಂದ ಕೊರೊನಾದಿಂದ ಕುಸಿತಕ್ಕೊಳಗಾದ ಕ್ಷೇತ್ರಗಳ ಮೇಲೆ ಗಮನ ಹರಿಸಲಾಗುತ್ತದೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ. ಅಲ್ಲದೆ ಕೃಷಿ ಕಾನೂನಿನ ವಿರುದ್ದ ದೆಹಲಿಯ ಗಡಿಗಳಲ್ಲಿ ರೈತರು ಹೋರಾಟ ಮಾಡುತ್ತಿರುವುದರಿಂದ ರೈತರನ್ನು ಕೂಡಾ ಈ ಬಜೆಟ್ ಕೇಂದ್ರೀಕರಿಸಲಿದೆ ಎಂದು ಅಭಿಪ್ರಾಯ ಹರಿದು ಬರುತ್ತಿದೆ.
ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್, ಬಜೆಟ್ ಜನರ ನಿರೀಕ್ಷೆಗೆ ಅನುಗುಣವಾಗಿರುತ್ತದೆ ಎಂದಿರುವ ಅವರು, “ಸಬ್ ಕಾ ಸಾಥ್, ಸಬ್‌ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಘೋಷವಾಕ್ಯದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರವು ‘ಆತ್ಮನಿರ್ಭರ ಭಾರತ’ ಪ್ಯಾಕೇಜ್ ಘೋಷಿಸುವ ಮೂಲಕ ದೇಶಕ್ಕೆ ಆರ್ಥಿಕತೆಗೆ ಹೊಸ ದಿಕ್ಕು ನೀಡಲಿದೆ ಎಂದಿದ್ದಾರೆ. ಏನೇ ಆದರೂ ಸೀತಾರಾಮನ್ ಹ್ಯಾಟ್ರಿಕ್ ಬಜೆಟ್ ಬಡವರ ನಿರೀಕ್ಷೆ ತಕ್ಕ ಹಾಗೇ ಇದ್ದರೆ ಸಾಕು.