ಸಮುದ್ರದ ಮಧ್ಯೆ ಆಳಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಒಂದು ಮಗುಚಿ ಬಿದ್ದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.
12 ಜನ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬೋಟ್ ಒಂದು ಸಮುದ್ರ ಮಧ್ಯೆ ನಾಲ್ಕು ವರ್ಷಗಳ ಹಿಂದೆ ಮುಳುಗಿರುವ ಹಡಗಿಗೆ ಡಿಕ್ಕಿಯಾಗಿ ಬೋಟ್ ಮಗುಚಿ ಬಿದ್ದಿದೆ. ಕೂಡಲೇ ಅವರನ್ನು ಹಿಂದಿನಲ್ಲಿದ್ದ ಬೋಟಿನವರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಹನ್ನೊಂದು ಮಂದಿ ಈಜುತ್ತಾ ಬಂದು ಇನ್ನೊಂದು ಬೋಟಿನ ಮೂಲಕ ಜೀವ ಉಳಿಸಿಕೊಂಡಿದ್ದು ಒಬ್ಬ ನೀರಿನಲ್ಲಿ ಕಾಣೆಯಾಗಿದ್ದಾನೆ.
ಕಾಣೆಯಾದವನು ತಮಿಳುನಾಡು ಮೂಲದವನು. ಉಳ್ಳಾಲ ಮೊಗವೀರಪಟ್ಟದ ಭಾನುಪ್ರಕಾಶ್ ಎಂಬುವವರ ಮಾಲೀಕತ್ವದ ಆದ್ಯ ಹೆಸರಿನ ಬೋಟ್ ಇದಾಗಿದೆ.
ಮುಳುಗಿದ್ದ ಬಾರ್ಜ್ ಹಡಗನ್ನು ತೆರವುಗೊಳಿಸಿಲ್ಲ ಹಾಗೂ ಹಡಗು ಇರುವ ಬಗ್ಗೆ ಯಾವುದೇ ಗುರುತನ್ನೂ ಹಾಕಿಲ್ಲ. ಇದರಿಂದಾಗಿ ಮೀನುಗಾರಿಕಾ ಬೋಟ್ ಗಳಿಗೆ ಇದು ಅಪಾಯಕಾರಿಯಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.