ಮುಂದಿನ ಮೂರು ತಿಂಗಳಿನಲ್ಲಿ ಉಪನಗರ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ನೆರವೇರಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಯಶವಂತಪುರ-ಚನ್ನಸಂದ್ರ ಹಾಗೂ ಬೈಯಪ್ಪನಹಳ್ಳಿ-ಹೊಸೂರು ದ್ವಿಪಥ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯೋಜನೆಗಳಿಗೆ 7,400 ಕೋಟಿ ಸಾಲವನ್ನು ಹೆಚ್ಚುವರಿಯಾಗಿ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಯೋಜನೆ ಆದಷ್ಟು ಬೇಗ ಪೂರ್ಣವಾಗಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಂದೇ ಪಕ್ಷ ಇದ್ದರೂ ಸಾಧನೆ ಏನು ಮಾಡುತ್ತೀರಿ ಎಂದು ಕೇಳುತ್ತಿರುವ ಕಾಂಗ್ರೆಸ್ಸಿನವರು ಟೀಕೆ ಮಾಡ್ತಾರೆ ಈಗ ಬಂದು ನೋಡಿ, ಇನ್ನು ಮೂರು ತಿಂಗಳಲ್ಲಿ ಉಪನಗರ ರೈಲು ಯೋಜನೆ ಸ್ಥಾಪನೆಯಾಗಲಿದೆ. ಇದನ್ನು ನೋಡಿದ ನಂತರವಾದರೂ ಟೀಕೆ-ಟಿಪ್ಪಣಿ ಮಾಡುವುದನ್ನು ನಿಲ್ಲಿಸಿ ಎಂದು ಸಿಎಂ ತಿರುಗೇಟು ನೀಡಿದರು.