ಚಾಮರಾಜನಗರ ಕೊಳ್ಳೇಗಾಲ ಕ್ಷೇತ್ರದ ಬಿಎಸ್‍ಪಿ ಶಾಸಕ ಎನ್.ಮಹೇಶ್ ಬುಧವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗ್ರೀನ್ ಸಿಗ್ನಲ್ ಕೊಟ್ಟಿರುವ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬೆಂಬಲಿಗರೊಂದಿಗೆ ಶಾಸಕ ಎನ್.ಮಹೇಶ್ ಬಿಜೆಪಿಗೆ ಸೇರಿಕೊಳ್ಳಲಿದ್ದಾರೆ.
ಎನ್.ಮಹೇಶ್ ಬಿಎಸ್‍ಪಿ ಪಕ್ಷದ ಚಿಹ್ನೆ ಅಡಿಯಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದರು. ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದ ಕಾರಣ ಸಮ್ಮಿಶ್ರ ಸರ್ಕಾರದ ಜೊತೆ ಕೈಜೊಡಿಸಿ ಸಚಿವರು ಕೂಡ ಆಗಿದ್ದರು. ಬಳಿಕ ಆದ ರಾಜಕೀಯ ಬೆಳವಣಿಗೆಯಿಂದ ಬಿಎಸ್‍ಪಿ ಪಕ್ಷದಿಂದ ಮಯಾವತಿ ಎನ್ ಮಹೇಶ್ ರನ್ನ ಉಚ್ಛಾಟನೆ ಮಾಡಿದರು.
ಶಾಸಕ ಎನ್ ಮಹೇಶ್ ಬಿಎಸ್‍ಪಿ ಪಕ್ಷದಿಂದ ಉಚ್ಛಾಟನೆ ಬಳಿಕ ಬಿಜೆಪಿ ಜೊತೆ ಹೆಚ್ಚು ಗುರುತಿಸಿಕೊಂಡು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದರು. ಬಿಜೆಪಿಗೆ ಸೇರ್ಪಡೆ ಆಗುವ ಬಗ್ಗೆ ಎನ್ ಮಹೇಶ್ ಬಿಜೆಪಿಯ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದರು. ಬಿಜೆಪಿ ನಾಯಕರ ಸಲಹೆ ಅಂತೆ ನಾಳೆ ಅವರು ಪಕ್ಷ ಸೇರಲಿದ್ದಾರೆ.