ಕೇಂದ್ರ ಬಜೆಟ್: ಏನಿದು ಹಲ್ವಾ ಸಮಾರಂಭ?

ನವದೆಹಲಿ: ಇಂದು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಗೆ ಸಂಬಂಧಿಸಿದಂತೆ ನಡೆಯುವ ಹಲ್ವಾ ಸಮಾರಂಭದ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಬಜೆಟ್ ಗೂ ಮುನ್ನ ಹಣಕಾಸು ಇಲಾಖೆ ಹಲ್ವಾ ಸಮಾರಂಭವನ್ನು ಹಮ್ಮಿಕೊಳ್ಳುತ್ತದೆ. ಬಜೆಟ್ ಮಂಡನೆಗೆ 10 ದಿನ ಬಾಕಿ ಇರುವಾಗ ಈ ಸಮಾರಂಭ ನಡೆಯುತ್ತದೆ.

ಹಲ್ವಾ ಸಮಾರಂಭಕ್ಕೆ ಚಾಲನೆ ನೀಡುವ ಮೂಲಕ ಕೇಂದ್ರ ಬಜೆಟ್ ಗೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಬಜೆಟ್ ಸಿದ್ಧಪಡಿಸುವ ಸಿಬ್ಬಂದಿಗಾಗಿ ಹಣಕಾಸು ಇಲಾಖೆ ಈ ವಿಶೇಷ ಸಮಾರಂಭವನ್ನು ಆಯೋಜಿಸುತ್ತದೆ. ಹಲ್ವಾ ಸಮಾರಂಭದ ಬಳಿಕವಷ್ಟೇ ಬಜೆಟ್ ಮುದ್ರಣಾ ಕಾರ್ಯ ಆರಂಭವಾಗುತ್ತದೆ. ಈ 10 ದಿನಗಳು ಸಿಬ್ಬಂದಿ ಬಾಹ್ಯ ಜಗತ್ತಿನ ಸಂಪರ್ಕ ಕಳೆದುಕೊಳ್ಳತ್ತಾರೆ. ವಿತ್ತ ಸಚಿವರು ಬಜೆಟ್ ಮಂಡಿಸಿದ ಬಳಿಕವಷ್ಟೇ ಈ ಸಿಬ್ಬಂದಿ ಹೊರಗೆ ಬರುತ್ತಾರೆ. ಬಜೆಟ್ ಗೌಪ್ಯತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸಿಬ್ಬಂದಿಯ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸಲಾಗುತ್ತದೆ. ವಿತ್ತ ಸಚಿವಾಲಯದ ಸಿಬ್ಬಂದಿಗೆ ಸಿಹಿ ತಿನ್ನಿಸುವ ಮೂಲಕ ಬಜೆಟ್ ಮುದ್ರಣ ಆರಂಭಗೊಳ್ಳುತ್ತದೆ.
ಬಜೆಟ್ ಮಂಡನೆಯ ಸಮಯದಲ್ಲಿ ಈ ಎಲ್ಲ ಸಿಬ್ಬಂದಿಯ ಬಗ್ಗೆ ಶ್ಲಾಘನೆ ಮಾಡಲಾಗುತ್ತದೆ. ಈ ಬಾರಿ ಕೋವಿಡ್ -19 ಹಿನ್ನೆಲೆಯಲ್ಲಿ ಮುದ್ರಿತ ಬಜೆಟ್ ಇರುವುದಿಲ್ಲ. ಬದಲಿಗೆ ಕಾಗದರಹಿತ ಬಜೆಟ್ ಮಂಡನೆ ಆಗಲಿದೆ. ಹೀಗಾಗಿ ಹಲ್ವಾ ಸಮಾರಂಭಕ್ಕೆ ಈ ವರ್ಷ ಬ್ರೇಕ್ ಹಾಕಲಾಗಿದೆ.