ನಾಲ್ಕಂತಸ್ತಿನ ಕಟ್ಟಡದಲ್ಲಿ ಬಿರುಕು: ಆತ್ಮಹತ್ಯೆಗೆ ಯತ್ನಿಸಿದ ಕಟ್ಟಡದ ಮಾಲೀಕ
ಹಾಸನ: ನಗರದ ರಿಂಗ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನಿನ್ನೆ ಅಗ್ನಿ ಅವಘಡ ಸಂಭವಿಸಿತ್ತು. ಐವತ್ತಕ್ಕೂ ಹೆಚ್ಚು ಬೌನ್ಸ್ ಸ್ಕೂಟರ್ ಗಳು ಅವಘಡದಲ್ಲಿ ಸುಟ್ಟು ಕರಕಲಾಗಿದ್ದವು. ಇದೀಗ ಬೆಂಕಿಯ ತೀವ್ರತೆಗೆ ಇಡೀ ಕಟ್ಟಡ ಬಿರುಕು ಬಿಟ್ಟಿದ್ದು ಬೀಳುವ ಆತಂಕ ಎದುರಾಗಿದೆ. ಕಷ್ಟಪಟ್ಟು ದುಡಿದು ಕಟ್ಟಿದ್ದ ಬಿಲ್ಡಿಂಗ್ ಸ್ಥಿತಿ ಕಂಡು ಮಾಲೀಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಗದೀಶ್ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಇದನ್ನು ಕಂಡ ಅವರ ಪತ್ನಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಿನ್ನೆ ಬೆಳಿಗ್ಗೆ ಬೌನ್ಸ್ ಶೋಂನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ ಕೆಳಮಹಡಿಯಲ್ಲಿದ್ದ ಐವತ್ತಕ್ಕೂ ಹೆಚ್ಚು ಸ್ಕೂಟರ್ ಗಳು ಸುಟ್ಟು ಭಸ್ಮವಾಗಿದ್ದು, ಇಡೀ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಆವರಿಸಿ ಸಂಪೂರ್ಣ ಹಾನಿಯಾಗಿದೆ. ಕಷ್ಟಪಟ್ಟು ಕಟ್ಟಿದ ಕನಸಿನ ಕಟ್ಟಡ ಬೀಳುವ ಸ್ಥಿತಿ ಕಂಡು ಮಾಲೀಕ ಾತ್ಮಹತ್ಯೆಗೆ ಯತ್ನಿಸಿದ್ದಾರೆನ್ನಲಾಗಿದೆ.
ಕುಟುಂಬದರೆಲ್ಲ ಬೇಕರಿಯಲ್ಲಿ ಕಷ್ಟಪಟ್ಟು ದುಡಿದು ಕಳೆದ ನಾಲ್ಕು ವರ್ಷಗಳ ಹಿಂದೆ ಈ ಕಟ್ಟಡವನ್ನು ಕಟ್ಟಿಸಿದ್ದರು. ಒಂದು ವರ್ಷದ ಹಿಂದೆ ಬೌನ್ಸ್ ಎಲೆಕ್ಟ್ರಾನಿಕ್ ಬೈಕ್ ಗೆ ಕಟ್ಟಡದಲ್ಲಿ ಬಾಡಿಗೆ ನೀಡಲಾಗಿತ್ತು. ಬೆಂಕಿಯಿಂದ ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿದ್ದು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇಡೀ ಕುಟುಂಬ ಬೀದಿಯಲ್ಲಿದೆ. ಹೀಗಿರುವಾಗ ಬೌನ್ಸ್ ಶೋರೂಂ ಮಾಲೀಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ಆಗಿರುವ ಹಾನಿಗೆ ಪರಿಹಾರ ನೀಡಬೇಕೆಂದು ಮಾಲೀಕ ಒತ್ತಾಯಿಸಿದ್ದಾರೆ.