ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿದ ಸಂಪುಟ ಉಪ ಸಮಿತಿ

ಬೆಂಗಳೂರು: ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆಗಳ ಸ್ಥಿರೀಕರಣಕ್ಕಾಗಿ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಪರಿಶೀಲಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಯ ಸಭೆ ನಡೆಯಿತು.
ಈ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು :
ಭತ್ತ, ರಾಗಿ, ಬಿಳಿಜೋಳ ಈ ಹಿಂದೆ 2020-21 ನೇ ಸಾಲಿನ ಮುಂಗಾರು ಋತುವಿನಲ್ಲಿ 1.10 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು 3 ಲಕ್ಷ ರಾಗಿಯನ್ನು ಮತ್ತು 4000 ಮೆಟ್ರಿಕ್ ಟನ್ ಬಿಳಿಜೋಳ ಖರೀದಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿತ್ತು. ಸದರಿ ಪ್ರಮಾಣವನ್ನು ಹೆಚ್ಚಿಸಲು ಕೋರಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಕೇಂದ್ರ ಸರ್ಕಾರವು ರಾಜ್ಯದ ಈ ಸಾಲಿನಲ್ಲಿ ರೈತರಿಂದ 12.10 ಲಕ್ಷ ಮೆಟ್ರಿಕ್ ಟನ್ ಭತ್ತ, 4 ಲಕ್ಷ ಮೆಟ್ರಿಕ್ ಟನ್ ರಾಗಿ ಮತ್ತು 1 ಲಕ್ಷ ಮೆಟ್ರಿಕ್ ಟನ್ ಬಿಳಿಜೋಳವನ್ನು ಖರೀದಿಸಲು ಅನುಮತಿ ನೀಡಿದೆ. ಅದರಂತೆ ಖರೀದಿಗೆ ಆದೇಶವನ್ನು ಹೊರಡಿಸಲಾಗಿದ್ದು, ಈ ಪ್ರಕ್ರಿಯೆಗೆ ಸಚಿವ ಸಂಪುಟ ಉಪ ಸಮಿತಿಯು ಅನುಮೋದನೆ ನೀಡತು.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಘೋಷಿಸಲಾಗಿರುವ ದರ :
ಭತ್ತ -ಸಾಮಾನ್ಯ-1868, ಭತ್ತ-ಗ್ರೇಡ್-ಎ-1888, ಬಿಳಿಜೋಳ- ಹೈಬ್ರಿಡ್-2620, ಬಿಳಿಜೋಳ ಮಾಲ್ದಂಡಿ-2640, ರಾಗಿ-3295, ತೊಗರಿ-6000, ಶೇಂಗಾ-5275, ಕಡಲೆ-5100
ಕೇಂದ್ರ ಸರ್ಕಾರದ ಪರವಾಗಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಆಹಾರಧಾನ್ಯಗಳನ್ನು ರಾಜ್ಯ ಸರ್ಕಾರದಿಂದ ಖರೀದಿಸಿ ಕೇಂದ್ರ ಸರ್ಕಾರದ ಲೆಕ್ಕಕ್ಕೆ ತೆಗೆದುಕೊಂಡು ಸಾರ್ವಜನಿಕ ವಿತರಣಾ ಪದ್ಧತಿಯಡಿ ರಾಜ್ಯದಲ್ಲಿನ ಪಡಿತರ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ರೈತರಿಂದ ಗರಿಷ್ಠ ಪ್ರಮಾಣದಲ್ಲಿ ಭತ್ತ ರಾಗಿ ಮತ್ತು ಬಿಳಿಜೋಳವನ್ನು ಖರೀದಿಸಲು ತೀರ್ಮಾನಿಸಲಾಗಿದೆ.
ತೊಗರಿ :
ಕೇಂದ್ರ ಸರ್ಕಾರವು ಘೋಷಿಸಿರುವ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಗೆ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲಿಗೆ 6 ಸಾವಿರ ರೂ ರಂತೆ ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್, ರಾಯಚೂರು ಬಳ್ಳಾರಿ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪ್ರತಿ ರೈತರಿಂದ ಪ್ರತಿ ಎಕೆರೆಗೆ 7.5 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ.
ಕಡಲೇಕಾಳು :
ಹಿಂಗಾರು ಹಂಗಾಮಿನಲ್ಲಿ ಕಡಲೆ ಉತ್ಪನ್ನವನ್ನು 5,100 ರೂ ಪ್ರತಿ ಕ್ವಿಂಟಾಲಿಗೆ ಬೆಂಬಲ ಬೆಲೆಯಂತೆ ಪಿ.ಎಸ್.ಎಸ್. ಸ್ಕೀಮ್‍ನಡಿ ಒಟ್ಟು 1,67,000 ಮೆಟ್ರಿಕ್ ಟನ್ ಖರೀದಿಗೆ ಅನುಮತಿ ನೀಡಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು. ಈ ಕುರಿತು ಸಭೆಯಲ್ಲಿ ಚರ್ಚಿಸಿ ಈ ಕೆಳಕಂಡಂತೆ ತೀರ್ಮಾನ ಕೈಗೊಳ್ಳಲಾಯಿತು.
ಈ ಸಭೆಯಲ್ಲಿ ಸಚಿವರಾದ ಉಮೇಶ ಕತ್ತಿ, ಬಸವರಾಜ ಬೊಮ್ಮಾಯಿ, ಜೆ.ಸಿ ಮಾಧುಸ್ವಾಮಿ, ಎಸ್.ಟಿ ಸೋಮಶೇಖರ್, ಬಿ.ಸಿ ಪಾಟೀಲ್, ಪ್ರಭು ಚವ್ಹಾಣ್ ಭಾಗವಹಿಸಿದ್ದರು.