ಪಂಜಾಬ್ ಮಾಜಿ ಮುಖ್ಯಮಂತ್ರ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ವಕ್ಷೇತ್ರ ಪಟಿಯಾಲದಲ್ಲಿ ಸೋಲುಂಡಿದ್ದಾರೆ.
ಕಾಂಗ್ರೆಸ್ ಪಕ್ಷ ತ್ಯಜಿಸಿ ಹೊಸ ಪಕ್ಷ ಸ್ಥಾಪಿಸಿದ್ದ ಅಮರಿಂದರ್ ಸಿಂಗ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಮತದಾರ ಅಮರಿಂದರ್ ಸಿಂಗ್ ಪಕ್ಷ ಹಾಗೂ ಬಿಜೆಪಿ ಎರಡನ್ನೂ ತಿರಸ್ಕರಿಸಿ ಆಮ್ ಆದ್ಮಿ ಕಡೆಗೆ ಒಲವು ತೋರಿದ್ದಾನೆ.
ಪಟಿಯಾಲದಲ್ಲಿ ಸ್ಪರ್ಧಿಸಿದ್ದ ಅಮರಿಂದರ್ ಸಿಂಗ್ ಆಮ್ ಆದ್ಮಿಯ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋಲುಂಡಿದ್ದಾರೆ. ಅಜಿತ್ ಪಾಲ್ 48,704 ಮತಗಳನ್ನು ಪಡೆದರೆ, ಅಮರಿಂದರ್ ಸಿಂಗ್ 29007 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮತದಾರ ನೀಡಿದ ತೀರ್ಪನ್ನು ಅತ್ಯಂತ ವಿನಯದಿಂದ ಸ್ವೀಕರಿಸುವೆ. ಗೆಲುವು ಕಂಡ ಆಪ್ ಗೆ ನನ್ನ ಅಭಿನಂದನೆಗಳು ಎಂದು ಅಮರಿಂದರ್ ಸಿಂಗ್ ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.