ನವದೆಹಲಿ : 2021ನೇ ಸಾಲಿನ ಸಿಬಿಎಸ್ಇ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರೀಕ್ಷೆಗಳು ಮೇ 4ರಿಂದ ಜೂನ್ 10 ರವರೆಗೆ ನಡೆಯಲಿವೆ. ಈ ಪರೀಕ್ಷೆಗಳು ಆಫ್ಲೈನ್ನಲ್ಲಿ ನಡೆಯುತ್ತವೆ.
ಸಿಬಿಎಸ್ಇ 10 ಮತ್ತು 12ನೇ ತರಗತಿ ಫಲಿತಾಂಶ ಜುಲೈ 10ರಂದು ಹೊರಬೀಳಲಿದೆ. ಈ ವರ್ಷ ಸುಮಾರು 30 ಲಕ್ಷ ಸಿಬಿಎಸ್ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಪರೀಕ್ಷೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಏಪ್ರಿಲ್ ತಿಂಗಳ ವೇಳೆಗೆ ಅಡ್ಮಿಟ್ ಕಾರ್ಡ್ ಲಭ್ಯವಾಗಬಹುದು. ಈ ಕೊರೋನಾ ಮಹಾಮಾರಿ ಪರಿಸ್ಥಿತಿ ಎದುರಿಸುತ್ತಿರುವ ವೇಳೆ, ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗಬಾರದೆಂದು ಶೇ.30 ರಷ್ಟು ಪಠ್ಯಕ್ರಮವನ್ನು ತಗ್ಗಿಸಲಾಗಿದೆ.
ಪ್ರಸ್ತುತ, ಕೆಲವು ರಾಜ್ಯಗಳಲ್ಲಿ ಶಾಲೆಗಳು ತೆರೆದಿವೆ. ಇನ್ನೂ ಕೆಲವು ಶಾಲೆಗಳು ಕೊರೋನಾ ಆತಂಕದಿಂದ ಆನ್ಲೈನ್ನಲ್ಲೇ ತರಗತಿ ಮುಂದುವರೆಸಿವೆ. ಆದಾಗ್ಯೂ ಸಿಬಿಎಸ್ಇ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಆಫ್ಲೈನ್ನಲ್ಲೇ ನಡೆಯಲಿವೆ.