ಮೊಹಾಲಿ: ಭಾರತ ವಿರುದ್ಧದ ಕ್ರಿಕೆಟ್ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಶ್ರೀಲಂಕಾ ಕ್ರಿಕೆಟಿಗರಿದ್ದ ಬಸ್ ನಲ್ಲಿ 2 ಜೀವಂತ ಗುಂಡುಗಳು ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.
ಮೊಹಾಲಿಯಲ್ಲಿ ಮಾರ್ಚ್ 4ರಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಆಡಲು ಮೈದಾನಕ್ಕೆ ಆಗಮಿಸಿದ್ದ ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಜೀವಂತ ಬುಲೆಟ್ ಗಳು ಪತ್ತೆಯಾಗಿವೆ.
ಲಂಕಾ ಕ್ರಿಕೆಟಿಗರನ್ನು ಹೋಟೆಲ್ ನಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿರುವ ಮೊಹಾಲಿ ಮೈದಾನಕ್ಕೆ ಕರೆತರಲು ನಿಯೋಜಿಸಲಾಗಿದ್ದ ಬಸ್ ನ್ನು ಪೊಲೀಸರು ಎಂದಿನಂತೆ ತಪಾಸಣೆ ಮಾಡುವಾಗ ಗುಂಡುಗಳು ಪತ್ತೆಯಾಗಿವೆ.
ತಕ್ಷಣವೇ ಅಲರ್ಟ್ ಆದ ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ಬಸ್ ಇದಾಗಿದ್ದು, ಇದರ ಮಾಲಿಕರು, ಚಾಲಕರನ್ನು ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಾರೆ.
ಪಂಜಾಬ್ ನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದ್ದ ಬಸ್ ಅನ್ನು ಶ್ರೀಲಂಕಾ ಆಟಗಾರರ ಪ್ರಯಾಣಕ್ಕೆ ಗುತ್ತಿಗೆ ಆಧಾರದ ಮೇಲೆ ಪಡೆಯಲಾಗಿತ್ತು. ಬಹುಶಃ ಮದುವೆ ಮನೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಬಳಸಲು ತಂದಿದ್ದ ಗುಂಡುಗಳು ಬಿದ್ದಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡುತ್ತಿಲ್ಲ.