ಹಲವಾರು ಬಾರಿ ಮೊಬೈಲ್ ಹ್ಯಾಂಡ್ ಸೆಟ್ ಬದಲಿಸಿದರೂ ಈಗಲೂ ನನ್ನ ಮೊಬೈಲ್ ಹ್ಯಾಕ್ ಆಗುತ್ತಿದೆ ಎಂದು ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಹಾಗೂ ಇತರೆ ಗಣ್ಯರ ಮಾಹಿತಿ ಸಂಗ್ರಹಿಸುವ ಇಸ್ರೇಲ್ ಮೂಲದ ಸ್ಪೈವೇರ್ ಪೆಗುಸಾಸ್ (ಮೊಬೈಲ್ ದತ್ತಾಂಶ ಕದಿಯುವ ಸಾಫ್ಟ್ ವೇರ್) ಕುರಿತು ಸಂಸತ್ ಅಧಿವೇಶನದಲ್ಲಿ ಗದ್ಧಲ ಉಂಟಾದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.
ನಾನೀಗ ಕನಿಷ್ಠ 5 ಬಾರಿ ಮೊಬೈಲ್ ಹ್ಯಾಂಡ್ ಸೆಟ್ ಬದಲಿಸಿದ್ದೇನೆ. ಆದರೂ ನನ್ನ ಮೊಬೈಲ್ ಹ್ಯಾಕ್ ಆಗುತ್ತಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ಪ್ರಶಾಂತ್ ಕಿಶೋರ್ ಅವರ ನೂತನ ಮೊಬೈಲ್ ಹಾಗೂ ಸಿಮ್ ಕಾರ್ಡ್ ಜುಲೈ 14ರಿಂದ ಬಳಕೆಯಾಗುತ್ತಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ನಂತರ ಬಿಜೆಪಿಯನ್ನು ತೊರೆದು ಇತರೆ ಪಕ್ಷಗಳ ಜೊತೆ ಕೈ ಜೋಡಿಸಿದ್ದರು. ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಗೆಲುವಿನ ಮಹತ್ವಾಕಾಂಕ್ಷೆಗೆ ತಣ್ಣೀರು ಸುರಿದಿದ್ದರು.
ಪ್ರಶಾಂತ್ ಕಿಶೋರ್ ಇದೀಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶರದ್ ಪವಾರ್ ಜೊತೆ ಕೈ ಜೋಡಿಸಿದ್ದೂ ಅಲ್ಲದೇ ಕಾಂಗ್ರೆಸ್ ಜೊತೆಯಲ್ಲೂ ಮಾತುಕತೆ ನಡೆಸಿದ್ದಾರೆ.