ಕೂಗೂ ಕೋಳಿಗೆ ಖಾರಾಮಸಾಲೆ..! ಹೈ ಬ್ರೀಡ್ ಕೋಳಿಮಾಂಸದ ಕರಾಳ ದರ್ಶನ..

ಒಂದೆರಡು ಚಿಕನ್ ತುಂಡು, ಬಾಯಿ ಚಪ್ಪರಿಸುವ ಮುನ್ನ ಓದಿಬಿಡಿ..
ಮಾಂಸದ ಬೇಡಿಕೆಯನ್ನು ಪೂರೈಸಲೆಂದೇ ಜಗತ್ತಿನಾದ್ಯಂತ ಲಕ್ಷಾಂತರ ಕೋಳಿ ಫಾರ್ಮುಗಳಿದ್ದು, ಕುಕ್ಕುಟ ಉದ್ಯಮ ಕೋಟ್ಯಂತರ ರೂಪಾಯಿಯ ವ್ಯವಹಾರವಾಗಿದೆ. ಇಂದು ಮಾರುಕಟ್ಟೆಯನ್ನ ಸಂಪೂರ್ಣವಾಗಿ ಆವರಿಸಿದ್ದು ಪೌಲ್ಟ್ರಿ ಫಾರ್ಂನಿಂದ ಬಂದಂತ ಬ್ರಾಯ್ಲರ್ ಕೋಳಿಗೆಳೆ. ಕಟ್ಟಕಡೆಯ ಹಳ್ಳಿಯನ್ನು ತಲುಪಿ ಬಿಟ್ಟಿವೆ. ಹೆಚ್ಚು ಜನರು ಮಾಂಸಕ್ಕಾಗಿ ಮೊರೆ ಹೋಗುವುದು ಮತ್ತು ತರಹೇವಾರಿ ಖಾದ್ಯ ತಯಾರಿಸುವುದು ಈ ಬ್ರಾಯ್ಲರ್ ಕೋಳಿಗಳಿಂದಲೆ. ಕೋಳಿಮಾಂಸ ತಿಂದ ಮಾರನೆಯ ದಿನ “ಮೈ ನೋವು”, ಸುಸ್ತು, ಅಜೀರ್ಣ, ಸಂದುಗಳಲ್ಲಿ ನೋವು ಬರುವ ವಿಚಾರವನ್ನ ಹಲವು ರೋಗಿಗಳು ಹೇಳುತ್ತಲೆ ಇರುತ್ತಾರೆ. ಇದು ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಇದರ ಹಿಂದಿನ ರಹಸ್ಯವು ಕರಾಳ ಮತ್ತು ಭಯಭೀತವಾಗಿದೆ. ಪೌಲ್ಟ್ರಿ ಫಾರ್ಂನಲ್ಲಿ ಹುಟ್ಟಿದ ಮರಿ..ದೊಡ್ಡದಾಗಿ, 1.5 ಕೆಜಿಯಿಂದ 2.5 ಕೆಜಿಗಟ್ಟಲೆ ತನ್ನ ದೇಹ ಬೆಳೆಸಿಕೊಳ್ಳುವುದು ಕೇವಲ 40 ರಿಂದ 45 ದಿನಗಳಲ್ಲಿಯೇ. ವಿಸ್ಮಯ ಅನ್ನಿಸಬಹುದು. ಮರಿ ಕೇಜಿಗಟ್ಟಲೆ ತೂಗಲು ತೆಗೆದುಕೊಳ್ಳುವ ಸಮಯ ಕೇವಲ ಒಂದೂವರೆ ತಿಂಗಳು. ನಿಮ್ಮಲ್ಲಿ ಹತ್ತಾರು ಪ್ರಶ್ನೆಗಳು ಉದ್ಭವಿಸುವುದರಲ್ಲಿ ಅಚ್ಚರಿಯಿಲ್ಲ. ಅಪ್ಪಟ ವ್ಯಾಪಾರದ ಈ ಫಾರ್ಂಗಳಿಂದ ಬಂದು ನಮ್ಮ ಉದರ ಸೇರುವ ಕೋಳಿಗಳನ್ನ ವಿವಿಧ ಔಷಧಿ, ಹಾರ್ಮೋನುಗಳು ಮತ್ತು ಆಂಟಿಬಯೋಟಿಕ್ [ ಜೀವ ನಿರೋಧಕಗಳ] ತಿನ್ನಿಸಿ, ಸುರಿದು ಪೋಷಿಸಲಾಗತ್ತೆ. ಕೋಳಿಗಳಿಗೆ ನೀಡುವ ಆಹಾರಗಳಲ್ಲಿ ಇವು ಭರಪೂರಕವಾಗಿ ಅಡಕವಾಗಿರುತ್ತವೆ. ಶೀಘ್ರ ಹಣಮಾಡುವ ಉದ್ದೇಶದಿಂದ ಕೃತಕವಾಗಿ ಕೋಳಿಗಳನ್ನು ಬೆಳೆಸುವ ಉದ್ಯಮಿಗಳೂ ಇಲ್ಲಿವೆ. ಹೀಗೆ ನಿಸರ್ಗಕ್ಕೆ ತದ್ವಿರುದ್ಧವಾಗಿ, ಬಲವಂತವಾಗಿ ಹೆಚ್ಚು ಮಾಂಸ ಬೆಳೆಯುವಂತೆ ಮಾಡಿ, ನಂತರ ಚಿಲ್ಲರೆ ವ್ಯಾಪಾರಿಗಳ ಮೂಲಕ ನಮ್ಮ ಉದರಕ್ಕೆ ಸುರಿಯುವರು.

ಒಂದಷ್ಟು ಫಾರ್ಂಗಳು ಉತ್ತಮ ರೀತಿಯಲ್ಲಿ ಕಾರ್ಯ ಮಾಡುವುದು ಇದೆ..!
ಹೀಗೆ ಬೆಳೆಸಿದ ಕೋಳಿಗಳಿಂದ, ಮಾಂಸದ ಮೂಲಕ ಹಲವು ರಾಸಾಯನಿಕಗಳು, ಹಾರ್ಮೋನ್, ಆಂಟಿಬಯೋಟಿಕಗಳು ನಮ್ಮ ದೇಹ ಆಕ್ರಮಿಸುತ್ತಿವೆ. ಆವಾಗಲೆ ದೇಹ ಒಮ್ಮೇಲೆ ಸುಸ್ತಾಗಿ, ಜರ್ಝರಿತಗೊಂಡು ನಿಧಾನವಾಗಿ ಚೇತರಿಸಿಕೊಳ್ಳತ್ತೆ. ಹಲವು ರೋಗಿಗಳು ಹೇಳುತ್ತಿದ್ದ ಚಿಕನ್ ಸೇವಿಸಿದ ನಂತರದ ತೊಂದರೆಗಳ ಹೇಳಿಕೊಳ್ಳದೆ ಸುಮ್ಮನಿರುತ್ತೇವೆ. ಕೋಳಿ ಮಾಂಸ ಬೆಳೆಸುವ, ಬೆಳೆಯುವ ಪರಿ ಮತ್ತು ಬಳಸಲಾಗುವ ರಾಸಾಯನಿಕಗಳಿಂದ, ವಿಷಯ ಮತ್ತಷ್ಟು ಗಂಭೀರತೆ ಪಡೆದುಕೊಳ್ಳುತ್ತೆ. ಗ್ರೋಥ್ ಹಾರ್ಮೋನ್ (ಬೆಳವಣಿಗೆ ಪ್ರಚೋದಕ) ಬ್ರಾಯ್ಲರ್ ಕೋಳಿಗಳು ನಾಟಿ ಕೋಳಿಗಳಿಗಿಂತ ವೇಗವಾಗಿ ಬೆಳೆಯುತ್ತವೆ ಕಾರಣ “ಗ್ರೋಥ್ ಹಾರ್ಮೋನ್”ಗಳ ಕೈ ಚಳಕ.ಆಹಾರ ಮತ್ತು ಔಷಧಗಳ ಮೂಲಕ “ಗ್ರೋಥ ಹಾರ್ಮೋನ್” (ಬೆಳವಣಿಗೆ ರಸದೂತಕ) ಯಥೇಚ್ಛವಾಗಿ ನೀಡಲಾಗತ್ತೆ ಆದ್ದರಿಂದಲೇ ಅಚ್ಚರಿಯೆಂಬಂತೆ ಕೆಲವೇ ವಾರಗಳಲ್ಲಿ ಕೋಳಿಗಳು ಬೆಳೆಯುವವು. ಕುಕ್ಕುಟೋದ್ಯಮದ ಪ್ರಕಾರ ನೈಸರ್ಗೀಕ ಧಾನ್ಯಗಳನ್ನ ಬಳಸಿ, ತಯಾರಿಸಿದ ಆಹಾರದ ಮೂಲಕ ಬೆಳೆಯುವಂತೆ ಮಾಡುತ್ತೇವೆ ಮತ್ತು ಕೋಳಿ ಮರಿಗಳು ಹಾಗೇ ಬೆಳೆಯುವಂತೆ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗಿದೆ.
ಗ್ರೋಥ್ ಹಾರ್ಮೋನ್ ಬಳಸುವುದು ಒಂದು ವಾಮಮಾರ್ಗ :ಹೀಗೆ ಕೋಳಿ ಮಾಂಸದ ಮೂಲಕ “ಗ್ರೋಥ ಹಾರ್ಮೋನ್”ಗಳು ನಮ್ಮ ದೇಹ ಸೇರುವುದು. ಆದ್ದರಿಂದಲೇ..ಹೆಣ್ಣುಮಕ್ಕಳು ವಯಸ್ಸಿಗೂ ಮುನ್ನವೇ ಬೇಗ ಋತುಮತಿಯಾಗುತ್ತಿರುವುದು. ಬೊಜ್ಜು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು. ದೇಹದ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತಿರೋದು.
ಬ್ಯಾಕ್ಟೀರಿಯಾ
ಕೋಳಿಯ ಎದೆಭಾಗದ ಮಾಂಸದ ಶೇ. 97 ರಷ್ಟರಲ್ಲಿ ಸೋಂಕು ಹರಡುವಷ್ಟು ಪ್ರಬಲವಾದ ಬ್ಯಾಕ್ಟೀರಿಯಾಗಳಿರುತ್ತವೆ. ಈ ಬ್ಯಾಕ್ಟೀರಿಯಾಗಳು ಶೈತ್ಯಿಕರಿಸಿದ ನಂತರವೂ ಜೀವಂತವಾಗಿದ್ದು, ಬೇಯಿಸಿದ ಬಳಿಕವೂ ಹಾನಿಮಾಡಬಲ್ಲಷ್ಟು ಪ್ರಮಾಣದ ಬ್ಯಾಕ್ಟೀರಿಯಾಗಳು ತುಂಡಿನ ಮೂಲಕ ಉದರ ಹೊಕ್ಕುತ್ತವೆ. ದೇಹವನ್ನು ಹತ್ತಾರು ಸೋಂಕಿಗೆ ಆಹುತಿ ನೀಡಿ, ಆರೋಗ್ಯ ಕುಸಿಯುವಂತೆ ಮಾಡುತ್ತವೆ.
ಆರ್ಸೇನಿಕ್ ಎಂಬ ಕಾರ್ಕೋಟಕ ಕೋಳಿಗಳು ಸೊಂಪಾಗಿ ಮಾಂಸ ಬೆಳಸಿಕೊಳ್ಳಲಿ, ರೋಗಗಳಿಂದ ಭಾದಿತವಾಗದಿರಲಿ ಮತ್ತು ಮಾಂಸದ ಬಣ್ಣ ಆಕರ್ಷಕ ತಿಳಿ ಗುಲಾಬಿ ಬಣ್ಣದ್ದಾಗಿರಲಿ ಅಂತಾನೇ, ರೋಕ್ಸಾರ್ಸೋನ್ ಎಂಬ ನಿಷೇಧಿತ ಔಷಧಿ ಕೆಲವರು ಬಳಸುವುದುಂಟು ಇದು ಕಾನೂನು ಬಾಹಿರ ಕಾರ್ಯವಾಗಿದೆ. ಇದು ಮುಂದೆ ವಿಷಕಾರಿ ಆರ್ಸೆನಿಕ್ ಆಗಿ ಮಾರ್ಪಾಡಾಗಿ, ಕೋಳಿಯ ಮಾಂಸಪೇಶಿಯಲ್ಲಿ ಶೇಖರಿಸಲ್ಪಡತ್ತೆ. ಹೀಗೆ ಕೋಳಿ ಮಾಂಸದ ಮೂಲಕ ಕಾರ್ಕೋಟಕ ವಿಷದಂತ ಆರ್ಸೆನಿಕ್ ನಮ್ಮ ದೇಹ ಸೇರಿ “ಕ್ಯಾನ್ಸರ್” ಕಾಯಿಲೆಗೆ ನಾಂದಿ ಹಾಡತ್ತೆ.2011ರವರೆಗೂ Roxarsone ಎಂಬ ಔಷಧಿಯನ್ನು ಕೋಳಿಗಳಿಗೆ ನೀಡಲಾಗುತ್ತಿತ್ತು. ಇದರಿಂದ ಕೋಳಿಗಳು ಅಲ್ಪ ಸಮಯದಲ್ಲಿಯೇ ಭಾರೀ ಪ್ರಮಾಣದ ಆಹಾರವನ್ನು ಸೇವಿಸಿ ಕೊಬ್ಬಿ ಮೈತುಂಬಿಕೊಳ್ಳುತ್ತಿದ್ದವು. ಆದರೆ 2011ರಲ್ಲಿ FDA (Food And Drug Administration) ವಿಭಾಗ ಈ ಔಷಧಿಯನ್ನು ನಿಷೇಧಿಸಿತು

ಆಂಟಿಬಯೋಟಿಕ್ ಪ್ರಯೋಗ
ಕೋಳಿಗಳು ಕಾಯಿಲೆ ಬೀಳದೆ, ದಷ್ಟಪುಷ್ಟವಾಗಿ ಬೆಳೆದು ದುಪ್ಪಟ್ಟು ಹಣ ಬರಲಿ ಅಂತಲೇ ಹಲವು ಆಂಟಿಬಯೋಟಿಕ್ ಗಳನ್ನ ಪ್ರಯೋಗಿಸಲಾಗತ್ತೆ. ಲೀವೋಪ್ಲಾಕ್ಸಿನ್ ಜೆಂಟಾಮೈಸಿನ್ ಸಲ್ಫೇಟ್, , ಸಲ್ಫಾಕ್ವಿನಾಕ್ಸಲಿನ್ ಮತ್ತು ಟೈಲೋಸಿನ್ ಟಾರ್ಟ್ರೇಟ್ ಮುಂತಾದವುಗಳು. ಇನ್ನೂ ಕೆಲ ಫಾರ್ಂಗಳಲ್ಲಿ ಪಶುವೈದ್ಯರ ಶಿಫಾರಿಸಿಲ್ಲದೇ “ಮೀಸಲು ಆಂಟಿಬಯೋಟಿಕ್” ಆದ “ಕೊಲೆಸ್ಟಿನ್ ಸಲ್ಫೇಟ್” ಬಳಸುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಒಮ್ಮೇಯ ಚಿಕನ್ ಸೇವನೆ ಒಂದು “ಸಂಪೂರ್ಣ ಡೋಸ್” ಆಂಟಿಬಯೋಟಿಕ್ ಸೇವಿಸಿದಂತೆ “( When we eat chicken, it is like taking a course of antibiotics) ಎಂದು ತಜ್ಞ ವೈದ್ಯರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆಯೇ ಯಥೇಚ್ಛವಾಗಿ ಆಂಟಿಬಯೋಟಿಕ್ಗಳು ಮಾಂಸದ ಮೂಲಕ ನಮ್ಮ ರಕ್ತ ಸೇರುತ್ತಿವೆ. ನಾವು ಕಾಯಿಲೆಗೆ ಬಿದ್ದಾಗ ನಮಗೆ ಆಂಟಿಬಯೋಟಿಕ್ ನೀಡಿದರೂ ವಾಸಿಯಾಗುವುದಿಲ್ಲ ಕಾರಣ ನಮ್ಮ ದೇಹ ಇಷ್ಟೀಷ್ಟೇ ಆಂಟಿಬಯೋಟಿಕ್ ಸೇವಿಸಿ,ಬ್ಯಾಕ್ಟೀರಿಯಾಗಳು “ಆಂಟಿಬಯೋಟಿಕ್ ಪ್ರತಿರೋಧ“[Antibiotic Resistance] ಬೆಳಸಿಕೊಂಡಿರುತ್ತವೆ. ಮನುಷ್ಯರಲ್ಲಿ “ಆಂಟಿಬಯೋಟಿಕ್ ಪ್ರತಿರೋಧ” ಬೆಳೆಯುತ್ತಿರುವುದು ಜಾಗತಿಕ ಸಮಸ್ಯೆಯಾಗಿದೆ. ಈ ರೀತಿ ಪ್ರತಿರೋಧ ಬೆಳೆದುದ್ದರಿಂದ ಜಗತ್ತಿನಲ್ಲಿ ಪ್ರತಿವರ್ಷ ಏಳು ಲಕ್ಷ ಜನ ಮರಣವಾಗುತ್ತಿದ್ದಾರೆ. 2050 ರ ಹೊತ್ತಿಗೆ ಈ ಸಂಖ್ಯೆ ಒಂದು ಕೋಟಿ ತಲುಪಬಹುದು ಎಂದು ಅಂದಾಜಿಸಲಿಗಿದೆ. ಭಾರತದಲ್ಲಿ ಪ್ರತಿವರ್ಷ 58 ಸಾವಿರ ನವಜಾತ ಶಿಶುಗಳು ದುರ್ಮರಣ ಹೊಂದುತ್ತಿವೆ ಎನ್ನಲಾಗಿದೆ.
ಬ್ರಯ್ಲಾರ್ ಕೋಳಿಮಾಂಸ ಸೇವನೆಯಿಂದಾಗುವ ತೊಂದರೆಗಳು
1.ದೇಹದಲ್ಲಿ ಕೊಬ್ಬಿನಂಶ ಏರಿಕೆ. ಸ್ಥೂಲಕಾಯ.
2.ಮೂತ್ರಪಿಂಡ ಕಾಯಿಲೆಗಳು.
3.ಪುರುಷರಲ್ಲಿ ನಪುಂಸಕತೆ.
4.ಕ್ಯಾನ್ಸರ್.
5.ಅಪಾಯಕಾರಿ ಸೋಂಕುಗಳು.
ಪರಿಹಾರ
1.ಕೋಳಿ ಮಾಂಸವನ್ನ ಚೆನ್ನಾಗಿ ನೀರು ಮತ್ತು ಸೋಂಕು ನಿವಾರಕ ದ್ರವದಿಂದ ತೊಳೆಯಬೇಕು
2.ತಾಜಾ ಕೋಳಿ ಮಾಂಸ ಖರೀದಿ
3.ಮಾಂಸವನ್ನು ಚೆನ್ನಾಗಿ ಬೇಯಿಸಬೇಕು.
4.ಕಡಿಮೆ ತೂಕದ ಕೋಳಿ ಆಯ್ಕೆ ಮಾಡಿ ಖರೀದಿಸಿ.
5.ಬ್ರಾಯ್ಲರ್ಗಿಂತ ನಾಟಿಕೋಳಿಯೇ ಉತ್ತಮ.
6.ಇವೆಲ್ಲವುಗಳನ್ನ ಹೊರತಾಗಿಯೂ ಕುಕ್ಕುಟೋದ್ಯಮ ಕಾನೂನಾತ್ಮಕವಾಗಿ ನಡೆಯುತ್ತಿದ್ದರೂ.
7.ಕೆಲವು ದಂಧೆಕೋರರಿಂದ ಇಷ್ಟೇಲ್ಲಾ ಅಪವಾದ ಹೊತ್ತಿದೆ. ಕೋಳಿ ಪ್ರೀಯರಿಗೆ ಮಾರಕವಾಗಿದೆ.
8.ಕೆಲವು ಬ್ರಾಂಡೆಡ್ ಚಿಕನ್ಗಳು ಇವೆಲ್ಲ ಅಪಾವಾದಗಳಿಂದ ತಪ್ಪಿಸಿಕೊಂಡು,ಸಂಸ್ಕರಿಸಿದ ಕೋಳಿಮಾಂಸ ನೀಡುವುದುಂಟು.