ಚಿಕ್ಕಬಳ್ಳಾಪುರ. ಕುಡಿದ ಅಮಲಿನಲ್ಲಿ ಮಗನೇ ತಂದೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚನ್ನಬೈರೇನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ. ಮಂಜುನಾಥ್ ಎಂಬಾತ ತನ್ನ ತಂದೆಯನ್ನು ಕೊಲೆ ಮಾಡಿದ್ದು, ಮುನೇಗೌಡ (50) ಕೊಲೆಗೀಡಾದ ದುರ್ದೈವಿ.
ಪ್ರತಿನಿತ್ಯ ಮಂಜುನಾಥ್ ಕುಡಿದು ಬಂದು ಗ್ರಾಮದಲ್ಲಿ ಹಾಗೂ ಮನೆಯಲ್ಲಿ ಕ್ಷುಲ್ಲಕ ವಿಷಯಕ್ಕೆ ಜಗಳವಾಡುತ್ತಿದ್ದನು. ಕಳೆದ ದಿನ ತಂದೆ ಮುನೇಗೌಡ ಮಗನಿಗೆ ಕುಡಿಬೇಡಪ್ಪಾ ಎಂದು ಬುದ್ಧಿ ಹೇಳಿದ್ದಾನೆ. ಆದ್ರೆ ಕುಡಿದ ಅಮಲಿನಲ್ಲಿದ್ದ ಮಗನ ಜಗಳ ತಾರಕಕ್ಕೇರಿದೆ.
ಜಗಳ ಬಿಡಿಸಲು ಬಂದ ತಾಯಿಯನ್ನು ಮನೆಯಿಂದ ಹೊರಹಾಕಿ, ತಂದೆಯ ಬೆನ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಪಾಪಿ ಮಗ. ಇನ್ನೂ ಈ ಕೊಲೆಗೆ ತಾತ ರಂಗಪ್ಪ ಎಂಬ ವ್ಯಕ್ತಿಯು ಸಹಾಯ ಮಾಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್ಪಿ ರವಿಶಂಕರ್, ವೃತ್ತ ನಿರೀಕ್ಷಕ ಶಶಿಧರ್, ಪಿಎಸ್ಐ ಲಕ್ಷ್ಮಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.