ಚಿಕ್ಕೋಡಿ: ಸಿನಿಮೀಯ ರೀತಿಯಲ್ಲಿ 2 ವರ್ಷದ ಗಂಡು ಮಗುಯೊಂದನ್ನ ಅಪಹರಣ ಮಾಡಿದ್ದ ಐವರನ್ನ ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ. ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಜೋಪಡಿಪಟ್ಟಿಯಲ್ಲಿನ 2 ವರ್ಷದ ಮಗುವನ್ನು ಕಳೆದ ಫೆ.6 ರಂದು ಬಂಧಿತ ಆರೋಪಿಗಳು ಸಂಜೆ 4 ಗಂಟೆಗೆ ಕಿಡ್ನಾಪ್ ಮಾಡಿದ್ದರು .
ಸಂಕೋನಟ್ಟಿ ಗ್ರಾಮದ ಜೋಪಡಿಪಟ್ಟಿಯಲ್ಲಿನ ಹುಸೇನವ್ವ ಬಹುರೂಪಿ ಎಂಬುವರ ಎರಡು ವರ್ಷದ ಮಗ ಯಲ್ಲಪ್ಪನನ್ನ ಕಿಡ್ನಾಪ್ ಮಾಡಲಾಗಿತ್ತು. ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .ಈ ಬಗ್ಗೆ ಪ್ರಕರಣದ ತನಿಖೆಗಾಗಿ ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ ಮೂರು ವಿಶೇಷ ತಂಡ ರಚಿಸಿದ್ದರು. ಈ ತಂಡ ತನಿಖೆ ಕೈಗೊಂಡು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಪ್ರಶಾಂತ್ ಬಡಕಂಬಿ, ಜ್ಯೋತಿಬಾ ಬಂಗಿ, ಅನಿಲ್ ಬಡಕಂಬಿ, ಜಂಬುಸಾಗರ ನಾಡಗೌಡ, ಕುಮಾರ್ ಹಿರೇಮನಿ ಬಂಧಿತ ಆರೋಪಿಗಳಾಗಿದ್ದಾರೆ . ತನಿಖೆ ವೇಳೆ ಮಗುವಿನ ಕಿಡ್ನಾಪ್ಗೆ ಕಾರಣ ಗಂಡು ಮಗು ಇಲ್ಲದ್ದಕ್ಕೆ ಅನಾಥ ಆಶ್ರಮದಿಂದ ಮಗು ತಂದುಕೊಡುವಂತೆ ಆರೋಪಿಗಳ ಬಳಿ ಮಹಿಳೆ ಕೇಳಿದ್ದು , ಮಹಿಳೆಯ ಬಳಿ 4 ಲಕ್ಷಕ್ಕೆ ಬೇಡಿಕೆ ಇಟ್ಟು ಎರಡು ಲಕ್ಷಕ್ಕೆ ಡೀಲ್ ಫೈನಲ್ ಮಾಡಿದ್ದರು. ನಂತರ ಸಂಗೋನಟ್ಟಿ ಜೋಪಡಿಪಟ್ಟಿಯಿಂದ ಎರಡು ವರ್ಷದ ಮಗು ಕಿಡ್ನಾಪ್ ಮಾಡಿ ಮಹಿಳೆಗೆ ಆರೋಪಿಗಳು ನೀಡಿದ್ದರು.
ಅನಾಥಾಶ್ರಮದಿಂದ ಕಾನೂನುಬದ್ಧವಾಗಿ ಮಗು ತಂದಿದ್ದಾಗಿ ಹೇಳಿ ಮಗುವನ್ನು ಆರೋಪಿಗಳು ಮಹಿಳೆಗೆ ನೀಡಿದ್ದರು .ಮಹಿಳೆಯಿಂದ ಎರಡು ಲಕ್ಷ ರೂ. ಹಣ ಪಡೆದು ಆರೋಪಿಗಳು ಹಂಚಿಕೊಂಡಿದ್ದರು. ಆರೋಪಿಗಳ ಬಳಿಯಿಂದ 65 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನ ಪೋಲಿಸರು ಜಪ್ತಿ ಮಾಡಿಕೊಂಡಿದ್ದಾರೆ