ಬಿಬಿಸಿ ಪ್ರಸಾರ ನಿಷೇಧಿಸಿದ ಚೀನಾ..!
ಬೀಜಿಂಗ್: ಚೀನಾ ಬಿಬಿಸಿ ನ್ಯೂಸ್ ಪ್ರಸಾರವನ್ನು ನಿಷೇಧಗೊಳಿಸಿದೆ. ಕ್ಸಿ ಜಿನ್ ಪಿಂಗ್ ಆಡಳಿತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ ಉಯಿಘರ್ಸ್ ಮುಸ್ಲಿಮರ ಮೇಲಿನ ದೌರ್ಜನ್ಯ ಮತ್ತು ಕೊರೋನಾ ನಿರ್ವಹಣೆಯಲ್ಲಿನ ವಿಫಲತೆಯನ್ನು ಬಿಬಿಸಿ ವರ್ಲ್ಡ್ ನ್ಯೂಸ್ ಪ್ರಸಾರ ಮಾಡಿತ್ತು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ವರದಿ ಮಾಡಿದ್ದರಿಂದ ಚೀನಾದಲ್ಲಿ ವಿದೇಶಿ ನ್ಯೂಸ್ ಚಾನೆಲ್ ಗಳ ಅವಶ್ಯಕತೆಯಿಲ್ಲ. ಮುಂದಿನ ಒಂದು ವರ್ಷದವರೆಗೆ ಚೀನಾದಲ್ಲಿ ಬಿಬಿಸಿ ನ್ಯೂಸ್ ಪ್ರಸಾರಮಾಡುವ ಅರ್ಜಿಯನ್ನು ನಾವು ಸ್ವೀಕರಿಸುವುದಿಲ್ಲ ಎಂದ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಚೀನಾದ ಟೆಲಿವಿಷನ್ ಮತ್ತು ರೇಡಿಯೋ ನಿಯಂತ್ರಕ, ರಾಷ್ಟ್ರೀಯ ರೇಡಿಯೋ ಮತ್ತು ಟೆಲಿವಿಷನ್ ಅಡ್ಮಿನಿಸ್ಟ್ರೇಷನ್ ಚೀನಾದಲ್ಲಿ ಬಿಬಿಸಿ ಪ್ರಸಾರವಾಗುವುದನ್ನು ನಿಷೇಧಿಸಿದೆ.
ಕಳೆದ ವಾರ ಬ್ರಿಟಿಷ್ ಮಾಧ್ಯಮ ನಿಯಂತ್ರಣ ಮಂಡಳಿ ಚೀನಾದ ಸರ್ಕಾರಿ ಸ್ವಾಮ್ಯದ ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್ವರ್ಕ್ ಪರವಾನಿಗಿಯನ್ನು ಹಿಂಪಡೆದಿತ್ತು. ಇದರ ಬೆನ್ನಲ್ಲೇ ಮುಯ್ಯಿಗೆ ಮುಯ್ಯಿ ಎಂಬಂತೆ ಚೀನಾ ಈ ನಿರ್ಧಾರ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಚೀನಾದ ಈ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಬಿಬಿಸಿ, ಇದು ಬೇಸರದ ನಡೆ. ನಿರ್ಬಂಧ ಸರಿಯಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವಿಶ್ವಾಸಾರ್ಹ ಸುದ್ದಿಗಳನ್ನು ಬಿತ್ತರಿಸುವ ಸುದ್ದಿಜಾಲವಾಗಿ ಬಿಬಿಸಿ ಜನಪ್ರಿಯವಾಗಿದೆ. ಚೀನಾದ ಕ್ರಮ ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆಯಾಗಿದೆ ಎಂದು ಹೇಳಿದೆ.