ಚಾಕಲೇಟ್ ತಿನ್ನಿ- ಆರೋಗ್ಯ ವೃದ್ಧಿಸಿಕೊಳ್ಳಿ

ಬೆಂಗಳೂರು: ಚಾಕಲೇಟ್ ನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯ ವೃದ್ಧಿಯನ್ನೂ ಮಾಡಿಕೊಳ್ಳಬಹುದು ಎನ್ನುತ್ತವೆ ಸಂಶೋಧನೆಗಳು. ಚಾಕಲೇಟ್ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಅದರಲ್ಲೂ ಮುಖ್ಯವಾಗಿ ಹೃದಯದ ಆರೋಗ್ಯ ವೃದ್ಧಿಗೆ ಚಾಕಲೇಟ್ ಸಹಾಯಕಾರಿ. ಡಾರ್ಕ್ ಚಾಕಲೇಟ್ ಸೇವನೆಯಿಂದ ನಮ್ಮ ದೇಹಕ್ಕೆ ಹೆಚ್ಚು ಪೌಷ್ಠಿಕ ಅಂಶಗಳು ಸಿಗುತ್ತವೆ. ಅಧ್ಯಯನವೊಂದರ ಪ್ರಕಾರ ನಿಯಮಿತ ಪ್ರಮಾಣದ ಚಾಕಲೇಟ್ ಸೇವನೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ ಎಂದು ಯೂರೋಪ್ ನ ಹೃದ್ರೋಗ ಸಂಶೋಧನಾ ಸಂಸ್ಥೆ ಹೇಳಿದೆ.

ಇನ್ನು, ಚಾಕಲೇಟ್ ಸೇವನೆ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಕಡಿಮೆ ಸಕ್ಕರೆ ಇರುವ ಡಾರ್ಕ್ ಚಾಕಲೇಟ್ ಸೇವಿಸಿದರೆ ಖಿನ್ನತೆಯಿಂದ ಹೊರಬರಬಹುದು. ಡಾರ್ಕ್ ಚಾಕಲೇಟ್ ಸೇವನೆ ಚರ್ಮದ ಆರೋಗ್ಯಕ್ಕೂ ಸಹಾಯಕಾರಿ. ಇದರಲ್ಲಿರುವ ಆ್ಯಂಟಿ ಏಜಿಂಗ್ ಅಂಶಗಳು ಚರ್ಮದ ಸುಕ್ಕನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತವೆ. ಕೋಕೋ ಬೀಜದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದರಿಂದ ಚಾಕಲೇಟ್ ಆರೋಗ್ಯಕ್ಕೆ ಒಳ್ಳೆಯದು. ಆದರೆ ಚಾಕಲೇಟ್ ನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಈ ಆರೋಗ್ಯ ಲಾಭಗಳು ದೊರೆಯುತ್ತವೆ.