ಕಣ್ಮನ ಸೆಳೆಯುವ ಚಾಕೊಲೇಟ್ ಗುಡ್ಡಗಳು..!
ಫಿಲಿಫೈನ್ಸ್: ಚಾಕೊಲೇಟ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಹೀಗಿರುವಾಗ ಚಾಕೊಲೇಟ್ ನಿಂದ ಮಾಡಿದ ಗುಡ್ಡವೇ ಇದ್ದರೆ ಹೇಗೆ! ಅರೆ, ಚಾಕೊಲೇಟ್ ಗುಡ್ಡಗಳಾ ಎಂದು ಆಶ್ಚರ್ಯ ಪಡಬೇಡಿ. ಈ ಗುಡ್ಡಗಳು ನಿಜವಾದ ಚಾಕೊಲೇಟ್ನಿಂದ ಮಾಡಿದ್ದಲ್ಲ. ಬದಲಿಗೆ ಗೋಳಾಕಾರವಾಗಿ ಒಮ್ಮೊಮ್ಮೆ ಚಾಕೊಲೇಟ್ ಬಣ್ಣದಲ್ಲಿ ಕಾಣುವುದರಿಂದ ಇವಕ್ಕೆ ಚಾಕೊಲೇಟ್ ಗುಡ್ಡಗಳು ಎಂಬ ಹೆಸರು ಬಂದಿದೆ. ಈ ಚಾಕೊಲೇಟ್ ಗುಡ್ಡಗಳಿರುವುದು ಫಿಲೀಪೈನ್ಸ್ ನ ಬಹೋಲ್ ದ್ವೀಪದಲ್ಲಿ. ಈ ಗುಡ್ಡಗಳು ಮಾನವ ನಿರ್ಮಿತವಲ್ಲ ಎಂಬುದು ಮತ್ತೊಂದು ವಿಶೇಷ.
ಬಹೋಲ್ ದ್ವೀಪ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿ. ಹೀಗಾಗಿಯೇ ಇಲ್ಲಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಚಾಕೊಲೇಟ್ ಗುಡ್ಡಗಳು ಈ ಕಣ್ಮನ ಸೆಳೆಯುವ ದ್ವೀಪದ ವಿಶೇಷತೆ. ಸಾವಿರಾರು ಸಂಖ್ಯೆಯಲ್ಲಿ ದ್ವೀಪದ ತುಂಬಾ ಹರಡಿರುವ ಈ ಚಾಕೊಲೇಟ್ ಗುಡ್ಡಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಈ ಗುಡ್ಡಗಳು ರಚನೆಯಾದ ಬಗ್ಗೆ ಇನ್ನೂ ನಿಗೂಢತೆ ಇದೆ. ಆದರೆ ಚಾಕೊಲೇಟ್ ಗುಡ್ಡಗಳ ಹುಟ್ಟಿಗೆ ಸಂಬಂಧಿಸಿದಂತೆ ಹತ್ತಾರು ದಂತಕಥೆಗಳಿವೆ.
ಇಬ್ಬರು ದೈತ್ಯ ರಾಕ್ಷಸರ ಹೊಡೆದಾಟದಲ್ಲಿ ಒಬ್ಬರ ಮೇಲೊಬ್ಬರು ಎರಚಲು ಬಳಸಿದ್ದ ಮಣ್ಣು ಮತ್ತು ಕಲ್ಲುಗಳ ರಾಶಿಯೇ ಈ ಗುಡ್ಡಗಳು. ಕೊನೆಗೆ ಶಕ್ತಿ ಕುಂದಿ ನಿತ್ರಾಣಾದ ರಾಕ್ಷಸರು ಸ್ನೇಹಿತರಾದರಂತೆ. ಇದಲ್ಲದೇ, ದೈತ್ಯನೊಬ್ಬನಿಗೆ ಸುಂದರವಾದ ಯುವತಿಯನ್ನು ಒಲಿಸಿಕೊಳ್ಳಲು ಆಸೆಯಾಯಿತಂತೆ. ಆಗ ಆ ದೈತ್ಯ ತನ್ನ ತೂಕವನ್ನು ಇಳಿಸಿಕೊಳ್ಳಲು ತನ್ನ ದೇಹದಲ್ಲಿದ್ದ ಕೊಳಕನ್ನು ಅಲ್ಲಲ್ಲಿ ಹೊರಹಾಕಿದನಂತೆ ಆಗ ಹುಟ್ಟಿಕೊಂಡಿದ್ದೇ ಚಾಕೊಲೇಟ್ ಗುಡ್ಡಗಳಂತೆ. ಹೀಗೆ ಚಾಕೊಲೇಟ್ ಗುಡ್ಡಗಳಿಗೆ ಸಂಬಂಧಿಸಿದಂತೆ ಹತ್ತಾರು ದಂತಕಥೆಗಳಿವೆ.
ಹವಳದ ದಂಡೆಗಳು ಸಮುದ್ರ ಮಟ್ಟದಿಂದ ಎತ್ತರದಲ್ಲಿ ಸಂಗ್ರಹವಾದಾಗ ಭೂಮಿಯ ಮೇಲ್ಪದರಕ್ಕೆ ಸ್ಥಳಾಂತರವಾಗಿ ಗುಡ್ಡಗಳು ರೂಪುಗೊಂಡವು. ಶತಮಾನಗಳಿಂದ ಗಾಳಿಯ ರಭಸ ಮತ್ತು ಸವೆತಕ್ಕೆ ಸಿಕ್ಕ ಗುಡ್ಡಗಳು ಗೋಳಾಕಾರದ ರಚನೆಯನ್ನು ಪಡೆದವು. ಸುಣ್ಣದ ಕಲ್ಲಿನಿಂದ ಮಾಡಲ್ಪಟ್ಟ ಇವನ್ನು ಕೆಸಾರ್ಟ್ ಎಂತಲೂ ಕರೆಯುತ್ತಾರೆ. ಚಾಕೊಲೇಟ್ ಗುಡ್ಡಗಳು ಹುಟ್ಟಿಕೊಂಡ ಬಗ್ಗೆ ಸಂಶೋಧಕರು ಈ ರೀತಿಯಾಗಿ ಹೇಳುತ್ತಾರೆ.
ಈ ಪುಟ್ಟ ಗುಡ್ಡಗಳ ಮೇಲೆ ಯಾವುದೇ ರೀತಿಯ ಮರಗಳು ಅಥವಾ ಪೊದೆಗಳಿಲ್ಲ. ಕೇವಲ ಹುಲ್ಲು ಮಾತ್ರ ಬೆಳೆದಿದ್ದು, ಈ ಹುಲ್ಲು ಬೇಸಿಗೆಯಲ್ಲಿ ಒಣಗಿದಾಗ ಕಂದು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಈ ಗುಡ್ಡಗಳು ಚಾಕೊಲೇಟ್ನಂತೆ ಕಾಣುತ್ತವೆ. ಈ ಸ್ಥಳ ಯುನೆಸ್ಕೋದ ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿದೆ. ಈ ಗುಡ್ಡಗಳ ಎತ್ತರ ಸುಮಾರು 150 ಅಡಿಗಳಿಂದ 400 ಅಡಿಗಳು. ಬಹೋಲ್ ದ್ವೀಪದ ಕಮರ್ರೆನ್ ಮತ್ತು ಬಟುವಾನ್ ನಗರಗಳ ಮಧ್ಯೆ ಈ ಗುಡ್ಡಗಳು ಹರಡಿವೆ.