ಶಾಲಾ ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಲು ನಿರ್ಧರಿಸಲಾಗಿದ್ದು, ಲಸಿಕೆ ನೀಡಿದ ನಂತರ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಕೆಲವು ಶಿಫಾರಸುಗಳನ್ನು ಮಾಡಿದೆ. ಅದರಂತೆ ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಹಂತ ಹಂತವಾಗಿ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು ಎಂದರು.
ದೇಶದಲ್ಲಿ ಪ್ರಸ್ತುತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುತ್ತಿರುವುದರಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿ ಕಾಲೇಜುಗಳನ್ನು ಆರಂಭಿಸಲಾಗುವುದು. ಸದ್ಯಕ್ಕೆ 1ರಿಂದ 10ನೇ ತರಗತಿ ಆರಂಭಿಸುವ ಚಿಂತನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.