ನನಗೆ ಐದು ಜನರ ತಲೆ ತೆಗೆಯಬೇಕಾಗಿದೆ. ಅನುಮತಿ ಕೊಡ್ತೀರಾ ಎಂದು ಮಾಜಿ ಸ್ಪೀಕರ್ ಆಗಿರುವ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿಧಾನಸಭಾ ಅಧ್ಯಕ್ಷರ ಮುಂದೆ ವಿಚಿತ್ರ ಬೇಡಿಕೆ ಇರಿಸಿದ ಘಟನೆ ಸೋಮವಾರ ನಡೆಯಿತು.
ಮುಳುಬಾಗಿಲಿನಿಂದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ಸ್ ಗಳ ಬಗ್ಗೆ ಸದನದಲ್ಲಿ ಅಸಮಾಧಾನ ವ್ಯಕ್ತಪಡಿಇದ ರಮೇಶ್ ಕುಮಾರ್, ಹಂಪ್ಸ್ ಹಾಕುವ ಮತ್ತು ತೆಗೆಯುವ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳು ಜವಾಬ್ದಾರಿ ನಿರ್ಧಾರ ಕೈಗೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು.
ಅವೈಜ್ಞಾನಿಕವಾಗಿ ಹಂಪ್ಸ್ ಹಾಕುವ ಅಧಿಕಾರಿಗಳನ್ನು ಈ ಸದನ ಮುಗಿಯುವ ಒಳಗೆ ಅಮಾನತು ಮಾಡಿ. ಸುಮ್ಮನೆ ಹಂಪ್ಸ್ ಗಳನ್ನು ಹಾಕುವುದಕ್ಕೆ ಕಡಿವಾಣ ಹಾಕಿ ಎಂದು ಅವರು ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೆಲವು ಸಂದರ್ಭಗಳಲ್ಲಿ ಸ್ಥಳೀಯರ ಬೇಡಿಕೆ ಮೇಲೆ ಹಂಪ್ಸ್ ಹಾಕ್ತಾರೆ. ಅದರಲ್ಲೂ ಸ್ಥಳೀಯ ಶಾಸಕರು, ಸಂಸದರು ಹೇಳಿಯೇ ಹಂಪ್ಸ್ ಹಾಕಿಸಿರುತ್ತಾರೆ ಎಂದರು.
ಸ್ಪೀಕರ್ ಮಾತಿನಿಂದ ಕೆರಳಿದ ರಮೇಶ್ ಕುಮಾರ್, ಹಾಗಾದರೆ ನಾನು ಹೇಳಿದರೆ ಕೇಳಿ ಬಿಡ್ತೀರಾ? ನನಗೂ ಐದು ಜನರ ತಲೆ ತೆಗೆಯಬೇಕು ಅಂದರೆ ಅನುಮತಿ ಕೊಡ್ತೀರಾ? ಎಂದು ಖಾರವಾಗಿ ಪ್ರಶ್ನಿಸಿದರು. ರಮೇಶ್ ಕುಮಾರ್ ಮಾತಿಗೆ ಹಲವು ಶಾಸಕರು ಧ್ವನಿಗೂಡಿಸುವ ಮೂಲಕ ಸಹಮತ ವ್ಯಕ್ತಪಡಿಸಿದರು.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಒಳ್ಳೆಯ ರಸ್ತೆ ಮಾಡಿ ಬ್ರೇಕ್ ಹಾಕಿದ್ರೆ ಹೇಗೇ? ಇಂಟರ್ ನ್ಯಾಷನಲ್ ಪ್ಲೈಟ್ ಹಿಡಿಯೋನು ಏನು ಮಾಡಬೇಕು? ಇಲಾಖಾ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು ಎಂದು ಶಾಸಕರು ಆಗ್ರಹಿಸಿದರು. ಡಿಸಿ, ಎಸ್ ಪಿ ಗಳ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳೋದಾಗಿ ಸಚಿವ ಸಿ.ಸಿ. ಪಾಟೀಲ್ ಭರವಸೆ ನೀಡಿದರು. ಇದರಿಂದ ಮತ್ತಷ್ಟು ಕೆರಳಿದ ರಮೇಶ್ ಕುಮಾರ್, ಇಂತಹ ಪ್ರಶ್ನೆ ಇನ್ಮುಂದೆ ಕೇಳೋದಿಲ್ಲ. ಇಡೀ ನಡಾವಳಿ ಹಿಂದಕ್ಕೆ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ಅಧಿಕಾರಿಗಳನ್ನು ಅಮಾನತು ಮಾಡಲು ನಿಮಗೇನು ತೊಂದರೆ? ಅವರೇನು ನಿಮ್ಮತ್ತೆ ಮಕ್ಕಳೇ ಎಂದು ರಮೇಶ್ ಕುಮಾರ್ ಕೇಳಿದಾಗ ರಮೇಶ್ ಕುಮಾರ್ ಮತ್ತು ಸಚಿವ ಸಿ.ಸಿ.ಪಾಟೀಲ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮತ್ತೆ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಮನವರಿಕೆ ಬಳಿಕ ಗೊಂದಲಕ್ಕೆ ತೆರೆಬಿದ್ದಿತು.