ಮುಂದಿನ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಜಮೀರ್ ಅಹ್ಮದ್ ಪದೇಪದೆ ಕರೆಯುತ್ತಿದ್ದಾರೆ. ಸದ್ಯ ನಾನು ಬಾದಾಮಿ ಶಾಸಕ. ಈ ಬಗ್ಗೆ ಮುಂದೆ ಯೋಚಿಸೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಪಡಿತರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾಮರಾಜಪೇಟೆಗೆ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಪದೇ ಪದೇ ಹೋಗ್ತಾರೆ ಅಂತ ಬಹಳ ಜನ ಪ್ರಶ್ನಿಸ್ತಾರೆ. ತಮ್ಮ ಕ್ಷೇತ್ರಕ್ಕೆ ಜಮೀರ್ ಪದೇ ಪದೇ ಕರೀತಾರೆ, ಅದಕ್ಕೆ ಬರುತ್ತಿರುತ್ತೇನೆ. ಬಾದಾಮಿ ಬಿಟ್ಟು ಚಾಮರಾಜಪೇಟೆಯಲ್ಲೇ ಸ್ಪರ್ಧಿಸಲು ಜಮೀರ್ ಹೇಳ್ತಾರೆ. ಅದು ಜಮೀರ್ ಖಾನ್ ಔದಾರ್ಯ. ಈ ಕ್ಷೇತ್ರಕ್ಕೆ ಬನ್ನಿ ಅಂತ ಔದಾರ್ಯ ತೋರಿಸ್ತಿದಾರೆ ಜಮೀರ್ ಎಂದು ಅವರು ಹೇಳಿದರು.
ಪ್ರಸ್ತುತ ನಾನು ಬಾದಾಮಿಯ ಶಾಸಕ. ಮುಂದಿನ ಬಾರಿಯೂ ಅಲ್ಲಿಂದಲೇ ಸ್ಪರ್ಧಿಸುತ್ತೇನೆ. ನಿಲ್ತೇನೆ ಎಂದು ಸಿದ್ದರಾಮಯ್ಯ ಹೇಳಿದಾಗ, ಚಾಮರಾಜಪೇಟೆಯಲ್ಲೇ ಸ್ಪರ್ಧಿಸಿ ಅಂತ ಜಮೀರ್ ಒತ್ತಾಯಿಸಿದರು. ಜಮೀರ್ ಮಾತಿಗೆ ಅಭಿಮಾನಿಗಳು ದನಿಗೂಡಿಸಿದರು.
ಅದೇನೇ ಇರ್ಲಿ, ಅದರ ಬಗ್ಗೆ ಆಮೇಲೆ ಯೋಚನೆ ಮಾಡೋಣ ಅಂದ ಸಿದ್ದರಾಮಯ್ಯ ಹೇಳುವ ಮೂಲಕ ಚುನಾವಣಾ ವಿಷಯವನ್ನು ತೇಲಿಸಿದರು.