ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಸರ್ಕಾರಕ್ಕೆ ಸುಮಾರು 60 ಲಕ್ಷ ನೋಂದಣಿ ಶುಲ್ಕ ಮೋಸ ಮಾಡಿದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಸನದಲ್ಲಿ ಇಂದು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ನೋಂದಣಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿ ಶಾಸಕ ಪ್ರೀತಂಗೌಡ ವಿರುದ್ದ ಘೋಷಣೆಗಳನ್ನು ಕೂಗಿದರು.
ಬೆಂಗಳೂರು-ಮಂಗಳೂರು ರಸ್ತೆ ಪಕ್ಕದಲ್ಲೇ ಸರ್ವೆ ನಂಬರ್ 41/2 ರಲ್ಲಿ ರಾಜರತ್ನಂ ಎಂಬ ಖಾಸಗಿ ವ್ಯಕ್ತಿಗೆ ಸೇರಿದ ಮ್ಯಾಚ್ ಇಂಡಸ್ಟ್ರಿಸ್ ನ ಸುಮಾರು ಐದೂವರೆ ಎಕರೆಯಷ್ಟು ಜಾಗವನ್ನು ಶಾಸಕ ಪ್ರೀತಂ ಗೌಡ ಖರೀದಿಸಿದ್ದಾರೆ. ಈ ಜಾಗದ ಮಾರುಕಟ್ಟೆ ಮೌಲ್ಯ ಸುಮಾರು 30 ಕೋಟಿ ರೂಪಾಯಿನಷ್ಟಿದೆ. ಸರ್ಕಾರಿ ಅಧಿಕಾರಿಗಳೇ ಈ ಜಾಗಕ್ಕೆ 12 ಕೋಟಿ 75 ಲಕ್ಷ ಮಾರುಕಟ್ಟೆ ಮೌಲ್ಯ ಕಟ್ಟಿದ್ದಾರೆ. ಆದರೂ ಕೂಡ ಶಾಸಕ ಪ್ರೀತಂ ಗೌಡ 7 ಕೋಟಿ 50 ಲಕ್ಷಕ್ಕೆ ಜಾಗ ಖರೀದಿಸಿರುವುದಾಗಿ ದಾಖಲೆಯಲ್ಲಿ ತೋರಿಸಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದ ಸರ್ಕಾರಕ್ಕೆ ಸುಮಾರು 60 ಲಕ್ಷ ನೋಂದಣಿ ಶುಲ್ಕ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕೂಡಲೇ ಶಾಸಕ ಪ್ರೀತಂ ಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಶಾಸಕರ ಅಕ್ರಮಕ್ಕೆ ಬೆಂಬಲ ನೀಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.