ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣಿಸಬೇಕು. ದ್ವಿತೀಯ ಪಿಯುಸಿ ಪರೀಕ್ಷೆ ಅಂಕ ಅಥವಾ ಗ್ರೇಡಿಂಗ್ ಗಳನ್ನು ಪರಿಗಣಿಸಬಾರದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಉನ್ನತ ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ.
ಡಿಸಿಎಂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರಿಗೆ ಈ ಕುರಿತು ಸಚಿವ ಸುರೇಶಕುಮಾರ್ ಪತ್ರ ಬರೆದಿದ್ದು, ಈ ತಿಂಗಳಾಂತ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಗ್ರೆಡಿಂಗ್ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ಅಶ್ವಥನಾರಾಯಣ ಅವರಿಗೆ ಬರೆದಿರುವ ಪತ್ರದಲ್ಲಿ, ಕೋವಿಡ್ ಪ್ರಸರಣದ ತೀವ್ರತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯ ನಡುವೆ ಸಮತೋಲನ ತರಲು ದ್ವಿತೀಯ ಪರೀಕ್ಷೆಗಳನ್ನು ರದ್ದು ಪಡಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಿರ್ದಿಷ್ಠವಾದ ತರ್ಕವನ್ನು ಅನುಸರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷೆ ನಡೆಸದೆ ಇದ್ದರೂ ಈ ಮೊದಲು ವಿದ್ಯಾರ್ಥಿಗಳು ಪಿಯುಸಿ ಮೊದಲ ವರ್ಷದಲ್ಲಿ ಗಳಿಸಿದ ಅಂಕಗಳು ಹಾಗೂ ಎಸ್ಎಸ್ಎಲ್ಸಿ ಫಲಿತಾಂಶ ಪರಿಗಣಿಸಿ ಅದಕ್ಕೆ ಸಮನಾದ ಸೂಕ್ತ ಮೌಲ್ಯಮಾಪನ ಸೇರ್ಪಡೆ ಮಾಡಿ ಗ್ರೇಡಿಂಗ್ ಫಲಿತಾಂಶ ನೀಡಲು ನಿರ್ಧರಿಸಲಾಗಿದೆ. ಒಂದು ವೇಳೆ ಈ ಗ್ರೇಡಿಂಗ್ ಬಗ್ಗೆ ಯಾವುದೇ ವಿದ್ಯಾರ್ಥಿ ಅತೃಪ್ತಿ ಹೊಂದಿದ್ದರೆ, ಅಂತಹ ವಿದ್ಯಾರ್ಥಿಗಳು ಸಮಯದಲ್ಲಿ ನಡೆಸಲಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಇದಕ್ಕಿಂತ ಔಚಿತ್ಯಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟಸಾಧ್ಯ ಎಂದು ಸಚಿವರು ಹೇಳಿದ್ದಾರೆ.
ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಅಂಕಗಳನ್ನು ಸಿಇಟಿ ಪರೀಕ್ಷೆಗೆ ಪರಿಗಣಿಸಿ ಸೂಕ್ತ ವೇಟೇಜ್ ಕಲ್ಪಿಸುವ ಮೂಲಕ ಫಲಿತಾಂಶ ಘೋಷಿಸಲಾಗುತ್ತದೆ. ಈ ಬಾರಿಯ ಗ್ರೇಡಿಂಗ್ ಫಲಿತಾಂಶವೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಖಚಿತವಾಗಿ ವ್ಯಕ್ತ ಪಡಿಸಿದರೂ, ಅವರಿಗೆ ಅದನ್ನು ನಿರಾಕರಿಸಿ ಇನ್ನೊಮ್ಮೆ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ಇಲ್ಲದೆ ಗ್ರೇಡಿಂಗ್ ಪಡೆದವರಿಗೆ ಮತ್ತು ಗ್ರೇಡಿಂಗ್ ನಿರಾಕರಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶವನ್ನು ಸಿಇಟಿಗೆ ಪರಿಗಣಿಸುವುದು ಅನನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.