ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಅಬ್ಬರ ಮತ್ತೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಕೊರೋನಾ 2ನೇ ಅಲೆ ಏಳುತ್ತಿರುವ ಭೀತಿಯಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಬಂಧಗಳನ್ನು ಹೇರಿ ಆದೇಶಿಸಿದೆ. ಇನ್ನು ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಕಳವಳ ವ್ಯಕ್ತಪಡಿಸಿದ್ದಾರೆ. ಅಗತ್ಯಬಿದ್ದರೆ ಜಿಲ್ಲಾಮಟ್ಟದಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಲಾಕ್ಡೌನ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಠಾಕ್ರೆ ಹೇಳಿದ್ದಾರೆ. ವಿದರ್ಭ ಪ್ರದೇಶದ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವುದರಿಂದ ಸೋಂಕು ಪ್ರಸರಣ ತಡೆಗೆ ಸರ್ಕಾರ ಮತ್ತೆ ವಾರಾಂತ್ಯ ಲಾಕ್ಡೌನ್ ಘೋಷಿಸಿದೆ.
ಏಕಾಏಕಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಯಾವುದೇ ಕಾರ್ಯಕ್ರಮಗಳನ್ನು ನಡೆಸಿದರೂ ಕೇವಲ ಶೇ.50ರಷ್ಟು ಜನರನ್ನು ಮಾತ್ರ ಸೇರಿಸಬೇಕು. ಇನ್ನು ಅಂತ್ಯಕ್ರಿಯೆಯಂಥ ಸಂದರ್ಭಗಳಲ್ಲಿ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಬೇಕೆಂದು ಸರ್ಕಾರ ಆದೇಶಿಸಿದೆ. ಇನ್ನು, ಒಂದೇ ಕಟ್ಟಡದಲ್ಲಿ 5ಕ್ಕಿಂತ ಅಧಿಕ ಕೊರೋನಾ ಪ್ರಕರಣಗಳು ಕಂಡುಬಂದಲ್ಲಿ ಆ ಕಟ್ಟಡವನ್ನು ಸೀಲ್ಡೌನ್ ಮಾಡಬೇಕು ಎಂದು ಆದೇಶಿಸಲಾಗಿದೆ. ಅಮರಾವತಿ, ಯವತ್ಮಾಲ್ ಮತ್ತು ಸತಾರಾ ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ರಾಜ್ಯದಲ್ಲಿ ವಿದೇಶಿ ತಳಿಯ ಕೋವಿಡ್-19 ಸೋಂಕು ಪತ್ತೆಯಾಗಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಮಹಾರಾಷ್ಟ್ರ ಸರ್ಕಾರದ ನಾಲ್ವರು ಸಚಿವರಿಗೆ ಕೊರೋನಾ ವಕ್ಕರಿಸಿದೆ. ಸಚಿವರಾದ ರಾಜೇಶ್ ಟೋಪೆ, ಓಂ ಪ್ರಕಾಶ್ ಕಡು, ಜಯಂತ್ ಪಾಟೀಲ್ ಮತ್ತು ರಾಜೇಂದ್ರ ಶಿಂಗಣಿ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಇವರನ್ನು ಹೊರತುಪಡಿಸಿ ಅನೇಕ ರಾಜಕೀಯ ನಾಯಕರಿಗೂ ಕೊರೋನಾ ಸೋಂಕು ದೃಢವಾಗಿದೆ.
ಇನ್ನು, ಕೊರೋನಾ ಕಠಿಣ ನಿಯಮಗಳನ್ನು ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿದ ಹಿನ್ನೆಲೆ 500 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಡೊಂಬಿವಿಲಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಇವರ ವಿರುದ್ಧ ವಿಪತ್ತು ನಿರ್ವಹಣಾ ನಿಯಂತ್ರಣ ನಿಯಮಗಳಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ.