ಬಿಬಿಎಂಪಿ ವ್ಯಾಪ್ತಿಯಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಎಲ್ಲಾ ಶಾಲೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ಗುರುತಿಸಿ, 2 ದಿನಕ್ಕಿಂತ ಹೆಚ್ಚು ಕೋವಿಡ್ ಸೋಂಕು ಗುಣಲಕ್ಷಣಗಳು ಕಂಡುಬರುವ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲು ಕ್ರಮವಹಿಸಬೇಕೆಂದು ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಬುಧವಾರ ರಾತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಕ್ಕಳ ತಜ್ಞರ ಸಮಿತಿ ಹಾಗೂ ತಾಂತ್ರಿಕ ತಜ್ಞರ ಸಮಿತಿ ಜೊತೆ ಸಭೆ ನಡೆಯಿತು.
ಈ ಸಭೆಯಲ್ಲಿ ನಗರದಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಬಾರದಂತೆ ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಟೆಸ್ಟಿಂಗ್ ಯಾವ ರೀತಿ ಮಾಡಬೇಕು, ಮಕ್ಕಳಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಅದರಂತೆ ನಗರದ ಎಲ್ಲಾ ಶಾಲೆಗಳಲ್ಲೂ ನೋಡಲ್ ಅಧಿಕಾರಿಯನ್ನು ಗುರುತಿಸಿ ಆ ಶಾಲಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿ ಜೊತೆ ಶಾಲೆಯ ನೋಡಲ್ ಅಧಿಕಾರಿಯನ್ನು ಟೈ-ಅಪ್ ಮಾಡಬೇಕು
ಶಾಲೆಗೆ ಬರುವ ಮಕ್ಕಳಲ್ಲಿ 2 ದಿನಕ್ಕಿಂತ ಹೆಚ್ಚು ದಿನಗಳ ಕಾಲ ಸೋಂಕು ಲಕ್ಷಣ ಕಂಡುಬಂದರೆ ಅಂತಹ ಮಕ್ಕಳನ್ನು ಶಾಲೆಗೆ ಬಾರದಂತೆ ತಿಳಿಸಬೇಕು. ಆ ಬಳಿಕ ಸೋಂಕು ಲಕ್ಷಣವಿರುವ ಮಕ್ಕಳ ಮಾಹಿತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದರೆ ಅಂತಹ ಮಕ್ಕಳ ಮನೆಗೆ ವೈದ್ಯಾಧಿಕಾರಿ ತಂಡವು ತೆರಳಿ ಪರೀಕ್ಷೆ ಮಾಡಬೇಕು ಎಂದರು.
ಮಕ್ಕಳಲ್ಲಿ 2 ದಿನಕ್ಕಿಂತ ಹೆಚ್ಚು ಕೋವಿಡ್ ಸೋಂಕು ಲಕ್ಷಣ ಕಂಡುಬರುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಆರ್‌ಟಿಪಿಸಿಆರ್ ಕೋವಿಡ್ ಟೆಸ್ಟ್ ಮಾಡುತ್ತಿದ್ದು, ಬಹುತೇಕ ಮಕ್ಕಳಿಗೆ ನೆಗೆಟಿವ್ ಬರುತ್ತಿದೆ. ಈ ಸಂಬಂಧ 2 ದಿನಕ್ಕಿಂತ ಹೆಚ್ಚು ಸೋಂಕು ಲಕ್ಷಣಗಳಿರುವ ಹಾಗೂ ಇತರೆ ಖಾಯಿಲೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುವ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡುವ ಸಂಬಂಧ ಪಾಲಿಕೆ ವತಿಯಿಂದ ಎಲ್ಲಾ ಆಸ್ಪತ್ರೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದರು ತಿಳಿಸಿದರು.
ಶಾಲೆಗೆ ಹೋಗುವ ಮಕ್ಕಳ ಜೊತೆ ಸಂಪರ್ಕ ಹೊಂದಿರುವವರಿಗೆ ಲಸಿಕೆ ನೀಡಬೇಕು. ಇದರಿಂದ ಎಲ್ಲರೂ ಸುರಕ್ಷಿತವಾಗಿರಬಹುದಾಗಿರುತ್ತದೆ. ನಗರದಲ್ಲಿ ಮಕ್ಕಳಲ್ಲಿ ಹೆಚ್ಚು ಕೋವಿಡ್ ಸೊಂಕು ಕಂಡುಬರುತ್ತಿಲ್ಲ. ಈ ಸಂಬಂಧ 0 ರಿಂದ 12 ವರ್ಷದ ಮಕ್ಕಳಿಗೆ ಶೇ. 7.21 ಹಾಗೂ 13 ರಿಂದ 18 ವರ್ಷದ ಮಕ್ಕಳಿಗೆ ಶೇ. 8.21 ಸೋಂಕು ಕಂಡುಬರುತ್ತಿದೆ. ಮಕ್ಕಳಿಗೆ ಈ ಕಾಲದಲ್ಲಿ ಸಾಮಾನ್ಯವಾಗಿ ಜ್ವರ, ನೆಗಡಿ, ಕೆಮ್ಮು ರೀತಿಯ ಲಕ್ಷಣಗಳು ಕಂಡುಬಂದು ಒಂದು ವಾರದೊಳಗಾಗಿ ಗುಣಮುಖರಾಗುತ್ತಾರೆ ಎಂದು ಹೇಳಿದರು.