Report – Reshma Belagutti
ಬೆಂಗಳೂರು : ನಮ್ಮ ಜನರು ಹಸು, ಕುರಿ, ಕೋಳಿ, ಮತ್ಸ್ಯದಲ್ಲಿ ದೇವರನ್ನು ಕಾಣುತ್ತಾರೆ. ಹೀಗಾಗಿ ಎಲ್ಲದರಲ್ಲಿ ದೈವಾಂಶ ಇದೆ. ಆದರೆ, ಸರಕಾರ ಯಾವುದೇ ಮುಂದಾಲೋಚನೆ ಮಾಡದೇ ಗೋ ಹತ್ಯೆ ನಿಷೇದ ಜಾರಿಗೆ ತಂದಿದೆ. ಹೀಗಾದರೆ ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.
ಶುಕ್ರವಾರ ವಿಧಾನ ಪರಿಷತ್ ಕಲಾಪದಲ್ಲಿ ಗೋ ಹತ್ಯೆ ನಿಷೇದ ಕಾಯ್ದೆ ಸಂಬಂಧ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಮಾಡಿರುವ ಸಿಎಂ ಇಬ್ರಾಹಿಂ ಅವರು ಈ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಗೋ ಶಾಲೆಗಳು ಎಷ್ಟಿವೆ. ಸರಕಾರ ಎಷ್ಟು ಗೋ ಶಾಲೆಯನ್ನು ತೆರೆಯಲು ಮುಂದಾಗಿದೆ? ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ಹಾಗೂ ಖಾದ್ಯ ಸೇವನೆ ಮಾಡುವವರಿಗೆ ಸಮಸ್ಯೆ ಆಗಲಿದೇಯಾ?. ವಯಸ್ಸಾದ ಗೋವುಗಳನ್ನು ಸರ್ಕಾರ ಖರೀದಿ ಮಾಡಲಿದೆಯೇ? ಎಂದು ಇಬ್ರಾಹಿಂ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಪ್ರಭುಚೌಹಣ್, ಇಬ್ರಾಹಿಂ ಅವರು ಹಿರಿಯ ಸದಸ್ಯರು. ಅವರ ಮಾತನ್ನ ನಾವು ಕೇಳ್ತೀವಿ. ಮಸೂದೆ ಮಂಡನೆ ನಂತ್ರ ನಾನು ಸಭೆ ಮಾಡ್ತಿನಿ. ಕಾಯ್ದೆ ಮಂಡನೆ ನಂತರ ಅನೇಕ ಯೋಜನೆ ಹಾಕಿಕೊಂಡಿದ್ದೀವಿ. ರೈತರು ಸೇರಿ ಎಲ್ಲರ ಜೊತೆಗೆ ಚರ್ಚೆ ಮಾಡ್ತಿವಿ ಎಂದು ಸದನದಲ್ಲಿ ಉತ್ತಿರಿಸಿದರು.
ಇದಕ್ಕೆ ಸುಮ್ಮನಾಗದ ಇಬ್ರಾಹಿಂ ಅವರು ಮಸೂದೆ ಮಂಡನೆಗೂ ಮೊದಲೇ ಚರ್ಚೆ ಮಾಡಬೇಕು ನಂತ್ರ ಅಲ್ಲ ಎಂದರು. ಈ ವೇಳೆ ಸಭಾ ನಾಯಕ ಶ್ರೀನಿವಾಸ್ ಪೂಜಾರಿ ಮದ್ಯಪ್ರವೇಶ ಮಾಡಿ, ಇಬ್ರಾಹಿಂ ಜೀವನ ಮತ್ತು ರಾಜಕೀಯ ಅನುಭವದ ಮೇಲೆ ಕಾಯ್ದೆ ವಿಚಾರದಲ್ಲಿ ವಿವರ ನೀಡಿದ್ದಾರೆ. ನಾವು ಎಲ್ಲ ಪರಿಶೀಲನೆ ಮಾಡ್ತಿವಿ, ಸಲಹೆ ಪಡೆಯುತ್ತೇವೆ. ಇಂದು ಗೋಹತ್ಯೆ ಮಸೂದೆ ಮೇಲ್ಮನೆಗೆ ಬರ್ತಿದೆ . ದಯವಿಟ್ಟು ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.
ಬಳಿಕ ಇಬ್ರಾಹಿಂ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ಅನಾನುಕೂಲ ಆಗುವುದಿಲ್ಲ ಎಂದು ಉತ್ತರ ನೀಡಿದ್ದೀರಿ. ಉತ್ತರ ನೋಡಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ವಯಸ್ಸಾದ ಹಸು, ಎತ್ತು ಯಾವ ಕೆಲಸಕ್ಕೂ ಬರುವುದಿಲ್ಲ. ತಂದೆ ತಾಯಿಯನ್ನ ಸಾಕಲು ಮಕ್ಕಳು ಸಿದ್ಧರಿಲ್ಲ ಕಾಲದಲ್ಲಿ, ನಮ್ಮ ಜನರು ವಯಸ್ಸಾದ ರಾಸುಗಳನ್ನು ಹೇಗೆ ಸಾಕಬೇಕು. ವಯಸ್ಸಾದ ರಾಸುಗಳನ್ನು ಸಾಕಲು ಬಜೆಟ್ ನಲ್ಲಿ ಹಣ ಇಟ್ಟಿದ್ದೀರಾ? ವರ್ಷಕ್ಕೆ ಎಷ್ಟು ಗೊಡ್ಡು ಹಸು ಬರುತ್ತವೆ? ಪಕ್ಕದ ರಾಜ್ಯದ ಮಾಹಿತಿ ಪಡೆದಿದ್ದಿರಾ? ಹಸು ಸತ್ತರೆ ಮಣ್ಣಿನಲ್ಲಿ ಹೂಳಬೇಕು ಅಂತ ನಿಯಮ ಮಾಡಿದ್ದೀರಿ. ಇದರ ಬಗ್ಗೆ ರೈತರ ಅಭಿಪ್ರಾಯ ಸಂಗ್ರಹಿಸಿದ್ದಿರಾ ಎಂದು ತರಾಟೆ ತೆಗೆದುಕೊಂಡು, ಇದೇಲ್ಲವನು ಬಿಡಿ, ಮೊದಲು ರೈತ ಸಂಘ ಹಾಗೂ ಸರ್ವ ಪಕ್ಷಗಳ ನಾಯಕರ ಸಭೆ ಕರೆಯಿರಿ. ಇದ್ದಕ್ಕಿದ್ದಂತೆ ಕಾಯ್ದೆ ತಂದು ಏನು ಮಾಡುತ್ತೀರಿ ಸಚಿವ ಪ್ರಭುಚೌಹಣ್ ಸಲಹೆ ನೀಡಿದರು.