ಭಾರತ ತಂಡದ ಮಾಜಿ ಬ್ಯಾಟ್ಸ್ ಮನ್ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಹೀರೊ ಯಶ್ ಪಾಲ್ ಶರ್ಮ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಯಶ್ ಪಾಲ್ ಶರ್ಮ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. 1983ರಲ್ಲಿ ವಿಶ್ವಕಪ್ ಗೆದ್ದ ಕಪಿಲ್ ದೇವ್ ನೇತೃತ್ವದ ಭಾರತ ತಂಡದ ಸದಸ್ಯರಾಗಿದ್ದ ಯಶ್ ಪಾಲ್ ಆತಿಥೇಯ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ನಲ್ಲಿ 61 ರನ್ ಗಳಿಸಿದ್ದರು. ಅಲ್ಲದೇ ಮೊಹಿಂದರ್ ಅಮರ್ ನಾಥ್ ಜೊತೆ 3ನೇ ವಿಕೆಟ್ ಗೆ ಮಹತ್ವದ 92 ರನ್ ಜೊತೆಯಾಟ ನಿಭಾಯಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಯಶ್ ಪಾಲ್ ಭಾರತದ ಪರ 37 ಏಕದಿನ ಹಾಗೂ 42 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಅಲ್ಲದೇ 2008ರಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.
1978ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿ ಮೂಲಕ ಏಕದಿನ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದರು. ರಣಜಿಯಲ್ಲಿ ಹರಿಯಾಣ, ರೈಲ್ವೆ ತಂಡಗಳನ್ನು ಪ್ರತಿನಿಧಿಸಿದ್ದರು. 160 ಪಂದ್ಯಗಳಲ್ಲಿ 8,933 ರನ್ ಗಳಿಸಿದ್ದು, 21 ಶತಕ ಗಳಿಸಿದ್ದು, 201 ಅವರ ಜೀವನಶ್ರೇಷ್ಠ ಸಾಧನೆಯಾಗಿತ್ತು.