ಕಾರವಾರ : ಅನಧಿಕೃತವಾಗಿ ಎಂಟು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಾಸವಾಗಿದ್ದ ಪಾಕಿಸ್ತಾನಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಖತೀಜಾ ಮೆಹರಿನ್ ಎನ್ನುವ ಪಾಕಿಸ್ತಾನದ ರಾಷ್ಟ್ರೀಯತೆ ಹೊಂದಿರುವ ಮಹಿಳೆಯು ಭಟ್ಕಳ ತಾಲೂಕಿನ ನವಾಯತ ಕಾಲೋನಿ ಮನೆಯೊಂದರಲ್ಲಿ ಅಕ್ರಮವಾಗಿ ವಾಸ್ತವ್ಯ ಮಾಡುತ್ತಿರುವ ಬಗ್ಗೆ ಗುಪ್ತಚರ ಮಾಹಿತಿಯನ್ನಾಧರಿಸಿ ಭಟ್ಕಳ ನಗರ ಠಾಣಾ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಈಕೆ ಪಾಕಿಸ್ತಾನದ ರಾಷ್ಟ್ರೀಯತೆಯನ್ನು ಹೊಂದಿದ್ದು, ಸುಮಾರು 8 ವರ್ಷಗಳ ಹಿಂದೆ ಭಟ್ಕಳದ ನವಾಯತ ಕಾಲೋನಿಯ ಜಾವೀದ್ ಮೊಹಿದ್ದೀನ್
ರುಕ್ನುದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿದ್ದಳು. 2014 ರಲ್ಲಿ 3 ತಿಂಗಳ ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದಳು.
ಬಳಿಕ ವಾಪಸ್ಸಾಗಿ 2015 ರಲ್ಲಿ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ನುಸುಳಿ ಬಂದು ತನ್ನ ಗಂಡನ ಮನೆಯಾದ ಭಟ್ಕಳದ ನವಾಯತ ಕಾಲೋನಿಯಲ್ಲಿ ತನ್ನ 3 ಮಕ್ಕಳೊಂದಿಗೆ ಅಕ್ರಮವಾಗಿ ವಾಸವಾಗಿದ್ದಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.
ಭಟ್ಕಳದಲ್ಲಿ ಈಕೆಯು ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ರೇಶನ್ ಕಾರ್ಡ್, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಪಡೆದಕೊಂಡಿದ್ದಾಳೆ. ಪೊಲೀಸರು ಈಕೆಯನ್ನು ಬಂಧಿಸುವ ಸಂದರ್ಭದಲ್ಲಿ ಇವೆಲ್ಲ ದಾಖಲೆಗಳನ್ನು ಕೂಡ ವಶಕ್ಕೆ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.
ಈಕೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೆಲವು ತಿಂಗಳುಗಳಿಂದ ಸ್ಥಳೀಯ ಪೊಲೀಸರು ಇತರ ತನಿಖಾ ಸಂಸ್ಥೆಯ ಸಹಕಾರದೊಂದಿಗೆ ಪತ್ತೆಗೆ ಸತತವಾಗಿ ಪ್ರಯತ್ನಿಸಿ, ಅಕ್ರಮವಾಗಿ ವಾಸವಾಗಿದ್ದ ಈಕೆಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈಕೆಯ ಮೇಲೆ ವಿದೇಶಿ ಕಾಯಿದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಎಸ್.ಪಿ.ಶಿವಪ್ರಕಾಶ ದೇವರಾಜು ಅವರು ತಿಳಿಸಿದ್ದಾರೆ.