ವಿಷ ಸೇವಿಸಿ ರೈತ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಯಾದಗಿರಿ: ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಇದೇ ಫೆಬ್ರವರಿ 2 ರಂದು ಸಾಲ ಬಾಧೆ ಹಿನ್ನೆಲೆ ನಡೆದಿದೆ ಎನ್ನಲಾದ ರೈತ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಾಲ ಬಾಧೆಗೆ ನಿಂಗಪ್ಪ ಯಾದವ್ (32) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರಿಗೆ ಸಾಲ ಬಾಧೆ ಹಿನ್ನೆಲೆ ಆತ್ಮಹತ್ಯೆ ನಡೆದಿದೆ ಎಂದು ಹೆಂಡತಿ ಹಣಮಂತಿ ಹೇಳಿಕೆ ನೀಡಿದ್ದರು.
ಆದರೆ ಈಗ ಆತ್ಮಹತ್ಯೆಗೆ ನಿಜವಾದ ಕಾರಣ ಬೆಳಕಿಗೆ ಬಂದಿದೆ. ಹಣ, ಆಸ್ತಿ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ನಡೆಯುತ್ತಿತ್ತು. ಹಣಮಂತಿ ನಿಂಗಪ್ಪನ ಹತ್ತಿರ ಎರಡು ಎಕರೆ ಜಮೀನಲ್ಲಿ ಭಾಗ ಕೇಳುತ್ತಿದ್ದಳು. ಇದೇ ವಿಚಾರಕ್ಕೆ ಅವರಿಬ್ಬರ ಮದ್ಯ ಆಗಾಗ ಗಲಾಟೆ ನಡೆಯುತ್ತಿತ್ತು. ಹೆಂಡತಿ ಮನೆಯವರಿಂದಲೂ ನಿಂಗಪ್ಪನಿಗೆ ನಿರಂತರ ಕಿರುಕುಳ ಇತ್ತು ಎಂದು ಬಲ್ಲವರು ಪೊಲೀಸರಿಗೆ ಮಾಹಿತಿ ನಿಡಿದ್ದರು. ಈ ಹಿನ್ನೆಲೆ ನಿಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮೊದಲು ನಿಂಗಪ್ಪ ವಿಡಿಯೋ ಮಾಡಿ ತನ್ನ ನೋವನ್ನು ತೋಡಿಕೊಂಡಿದ್ದಾರೆ. ಸದ್ಯ ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಂತಾಗಿದೆ. ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಎರಡನೇ ಹೆಂಡತಿ ರೇಣುಕಾ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.