ವಿಶ್ವದ ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ ಸುದ್ದಿಗೋಷ್ಠಿ ವೇಳೆ ಬಾಟಲ್ ಪಕ್ಕಕ್ಕೆ ಇಟ್ಟಿದ್ದಕ್ಕೆ ಕೂಲ್ ಡ್ರಿಂಕ್ಸ್ ದೈತ್ಯ ಉದ್ದಿಮೆ ಕೋಕಾ ಕೋಲಾ ಕಂಪನಿಗೆ 4 ಶತಕೋಟಿ ಡಾಲರ್ ನಷ್ಟವುಂಟಾಗಿದೆ.
ಹೌದು, ಪೋರ್ಚುಗಲ್ ಮತ್ತು ಹಂಗೇರಿ ನಡುವಿನ ಯುರೋ ಕಪ್ ಫುಟ್ಬಾಲ್ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿದ ಪೋರ್ಚುಗಲ್ ನ ಈ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸುದ್ದಿಗೋಷ್ಠಿಯಲ್ಲಿ ಮುಂದೆ ಇಟ್ಟ ಕೋಕಾ ಕೋಲಾ ಕಂಪನಿಯ ಬಾಟಲ್ ಗಳನ್ನು ಪಕ್ಕಕ್ಕೆ ಇಟ್ಟಿದ್ದರು. ಇದರ ಬೆನ್ನಲ್ಲೇ ಕೋಕಾ ಕೋಲಾ ಕಂಪನಿಗೆ 4 ಶತಕೋಟಿ ಡಾಲರ್ ನಷ್ಟ ಉಂಟಾಗಿದೆ.
36 ವರ್ಷದ ರೊನಾಲ್ಡೊ ಕೋಕ್ ಕಂಪನಿಯ ಬಾಟಲ್ ಗಳನ್ನು ಪಕ್ಕಕ್ಕೆ ತಳ್ಳಿ `ಅಕ್ವಾ’(ಪೋರ್ಚುಗಲ್ ಭಾಷೆಯಲ್ಲಿ ನೀರು) ಕೊಡಿ. ನಮಗೆ ನೀರಿನ ಅವಶ್ಯಕತೆ ಇದೆ ಎಂದು ಹೇಳಿ ನೀರಿನ ಬಾಟಲ್ ಎತ್ತಿ ಹಿಡಿದರು. ಈ ಮೂಲಕ ನೀರಿನ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡರು.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದೂ ಅಲ್ಲದೇ ವೈರಲ್ ಆಗಿ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತು. ಇದರಿಂದ ಫುಟ್ಬಾಲ್ ಅಭಿಮಾನಿಗಳು ಅಲ್ಲದೇ ಎಲ್ಲೆಡೆ ಕೋಕಾ ಕೋಲಾ ಖರೀದಿಸುವುದನ್ನು ನಿಲ್ಲಿಸಿದರು. ಇದರಿಂದ ಕೆಲವೇ ಗಂಟೆಗಳಲ್ಲಿ ಕೋಕ್ ಕಂಪನಿಗೆ ಭಾರೀ ನಷ್ಟ ಉಂಟಾಗಿದೆ.
ವಿಶೇಷ ಅಂದರೆ ಕೋಕ್ ಕಂಪನಿ ಯುರೋ ಕಪ್ 2020ಯ ಅಧಿಕೃತ ಪ್ರಾಯೋಜಕತ್ವ ಪಡೆದಿತ್ತು. ಈ ಘಟನೆಯಿಂದ ಕೋಕ್ ಮಾರಾಟ ಶೇ.1.6ರಷ್ಟು ಕುಸಿತ ಕಂಡಿದೆ. ಅಲ್ಲದೇ ಮಾರುಕಟ್ಟೆ ಮೌಲ್ಯ 242 ರಿಂದ 238 ಶತಕೋಟಿ ಡಾಲರ್ ಗೆ ಕುಸಿಯಿತು.
ಆಟಗಾರರು ಕುಡಿಯಲು ನೀರು ಕೇಳಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ರುಚಿ, ಅಭಿರುಚಿ ಇರುತ್ತದೆ. ಇದನ್ನು ನಾವು ತಳ್ಳಿ ಹಾಕಲು ಆಗುವುದಿಲ್ಲ ಎಂದು ಕೋಕ್ ಕಂಪನಿ ಸ್ಪಷ್ಟನೆ ನೀಡಿದೆ.