ನಾನು ಆರ್ ಎಸ್ಎಸ್ ಸ್ವಯಂ ಸೇವಕ. ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಹುಕ್ಕಾ ಬಾರಿನ ಬಗ್ಗೆ ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹುಕ್ಕಾ ಬಾರ್ ಬಗ್ಗೆ ಮಾತನಾಡಿದ್ದಕ್ಕೆ ಉರಿ ಹತ್ತಿಕೊಂಡು ಮಾತನಾಡ್ತಿದ್ದಾರೆ. ನೆಹರೂ ಹುಕ್ಕಾ ಸೇದುತ್ತಿದ್ದದ್ದು ತಪ್ಪೋ, ರವಿ ಹೇಳಿದ್ದು ತಪ್ಪೋ? ರವಿ ಹೇಳಿದ್ದು ತಪ್ಪು ಅನ್ನುವುದಾದ್ರೆ ಅವರಿಗೆ ನೆಹರೂ ಬಗ್ಗೆ ಇನ್ನೆಷ್ಟು ಆಕ್ರೋಶ ಇರಬಹುದು ಎಂದು ಪ್ರಶ್ನಿಸಿದರು.
ನೆಹರೂ ಹುಕ್ಕಾ ಸೇದುವ ನೂರಾರು ಫೋಟೋಗಳಿವೆ. ನನ್ನ ಮೇಲೆ ಇಷ್ಟು ದ್ವೇಷ ಇದೆ, ಕಾಂಗ್ರೆಸ್ಸಿಗರಿಗೆ ನೆಹರೂ ಬಗ್ಗೆ ಎಷ್ಟು ದ್ವೇಷ ಇರಬಹುದು? ನೆಹರೂ, ಇಂದಿರಾ ಬಗ್ಗೆ ನಾನು ಮಾತನಾಡಿದ್ದು ತಪ್ಪು ಅನ್ನುತ್ತಿದ್ದಾರೆ. ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಇಂದಿರಾ ಬಗ್ಗೆ ಮಾತನಾಡಿರುವುದಾ ಹಾಕಿಸಬೇಕಾ? ಇಬ್ರಾಹಿಂ ಇಂದಿರಾ ಗಾಂಧಿಯನ್ನ ಏನೆಂದು ಕರೆದಿದ್ರು ನಾನು ಆ ಮಟ್ಟಕ್ಕೆ ಇಳಿದಿಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ಕುಡಿಯೋ ಅಭ್ಯಾಸವಿಲ್ಲ, ಕುಡುಕನ ಪಟ್ಟ ಕಟ್ಟಿದರು. ಆದರೆ, ದಿನಾ ಕುಡಿಯುವವರು ಅವರೇ. ನಾನು 5 ಗಂಟೆಗೆ ಎದ್ದು ಯೋಗ ಮಾಡ್ತೀನಿ, ಇಡೀ ದಿನ ಸಕ್ರಿಯವಾಗಿ ಇರುತ್ತೇನೆ. ಇವರ ಹಳೇ ಕಥೆಗಳನ್ನ ಹೇಳಬೇಕಾ? ನಾನು ಆರ್.ಎಸ್.ಎಸ್. ಸ್ವಯಂ ಸೇವಕ, ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದರು.