ನನ್ನ ಶ್ಯೂರಿಟಿ ಪಡೆದು 25 ಕೋಟಿ ರೂ. ವಂಚನೆ ಮಾಡಿದ ಪ್ರಕರಣದ ಹಿಂದೆ ಸಣ್ಣ ಪುಟ್ಟ ವ್ಯಕ್ತಿಗಳಿಲ್ಲ. ದೊಡ್ಡ ತಲೆಗಳಿವೆ. ಅದು ಯಾರು ಅಂತ ಗೊತ್ತಾದರೆ ಸುಮ್ಮನೆ ಅಂತೂ ಬಿಡುವುದಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಹಿಂದೆ ನಿರ್ಮಾಪಕ, ಉಮಾಪತಿ, ಹರ್ಷ ಮುಂತಾದವರ ಹೆಸರು ಕೇಳಿ ಬಂದಿದೆ. ಇವರೇ ಮಾಡಿಸಿದ್ದಾರೋ ಅಥವಾ ಇವರು ಮಿಕಗಳಾಗಿದ್ದಾರೋ ಗೊತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾನು ಯಾರ ಮೇಲೂ ಅನುಮಾನಪಡುತ್ತಿಲ್ಲ. ಯಾಕೆಂದರೆ ಇದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ ಎಂದರು.
ಅರುಣಾ ಕುಮಾರಿ ಪೊಲೀಸರ ಬಳಿ ಇದರ ಹಿಂದೆ ಉಮಾಪತಿ ಇದ್ದಾರೆ. ಬಾಯಿ ಬಿಟ್ಟರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾಳೆ. ನಂತರ ಹರ್ಷ ಮತ್ತು ಇನ್ನಿತರರ ಹೆಸರು ಉಲ್ಲೇಖಿಸಿದ್ದಾಳೆ. ಆದರೆ ಮೊನ್ನೆ ಕರೆ ಮಾಡಿ ಇನ್ನೆರಡು ದಿನ ಸಮಯ ಕೊಡಿ. ಎಲ್ಲವನ್ನೂ ಹೇಳುತ್ತೇನೆ. ನಿಮಗೆ ಮೋಸ ಮಾಡುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ ಎಂದು ದರ್ಶನ್ ವಿವರಿಸಿದರು.
ಪೊಲೀಸರು ತನಿಖೆ ಮಾಡುವುದರ ಜೊತೆ ನಮ್ಮದೇ ಆದ ರೀತಿಯಲ್ಲಿ ಅನುಮಾನ ಬೆನ್ನು ಹತ್ತಿ ಹೋದಾಗ ಅರುಣಾಕುಮಾರಿ ನನ್ನ ಸೆಕ್ಯೂರೆಟಿ ಗಾರ್ಡ್ ಪತ್ನಿ ಎಂಬುದು ಗೊತ್ತಾಗಿದೆ. ಇವರು ನಾಲ್ಕೈದು ವರ್ಷದಿಂದ ದೂರ ಇದ್ದು, ಅರುಣಾಕುಮಾರಿ ಪಿಯುಸಿ ಅಷ್ಟೇ ಓದಿರುವುದು. ಆದ್ದರಿಂದ ಆಕೆ ಬ್ಯಾಂಕ್ ಮ್ಯಾನೇಜರ್ ಆಗಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದು ಬಂದಿದೆ ಎಂದು ಅವರು ಹೇಳಿದರು.
ಉಮಾಪತಿ ತಪ್ಪು ಮಾಡಿದ್ದರೆ ನಮ್ಮ ಜೊತೆ ಇರುತ್ತಿರಲಿಲ್ಲ. ಅಲ್ಲದೇ ಹರ್ಷ ಮುಂತಾದವರು ಕೂಡ ನಮ್ಮ ಜೊತೆ ಇರುತ್ತಿರಲಿಲ್ಲ. ಸದ್ಯಕ್ಕೆ ಉಮಾಪತಿ ಕೂಡ ಎರಡು ದಿನ ಸಮಯಾವಕಾಶ ಕೇಳಿದ್ದಾರೆ. ಅಲ್ಲದೇ ಇಡೀ ಪ್ರಕರಣ ನಿಮ್ಮ ಸುತ್ತವೇ ತಿರುಗುತ್ತಿರುವುದರಿಂದ ನಿನ್ನನ್ನು ನೀನು ಹೇಗೆ ಸಮರ್ಥಿಸಿಕೊಳ್ಳುತ್ತಿಯಾ ನೋಡು ಎಂದು ಹೇಳಿದ್ದೇವೆ ಎಂದು ದರ್ಶನ್ ಹೇಳಿದರು.
ಉಮಾಪತಿ ಮೋಸ ಮಾಡುವುದಿದ್ದರೆ ಯಾಕೆ ಮಾಡುತ್ತಿದ್ದರು? ಎಲ್ಲರಿಗೂ ಗೊತ್ತಿರುವಂತೆ ಕೊರೊನಾ ಕಾಲದಲ್ಲೂ ದುಡ್ಡು ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಗೆ ದುಡ್ಡಿನ ಸಮಸ್ಯೆ ಇಲ್ಲ. ಸಿನಿಮಾ ಫೇಲ್ಯೂರ್ ಆಗಿದ್ದರೆ ಅನುಮಾನಪಡಬಹುದಾಗಿತ್ತು. ಅಲ್ಲದೇ ಉಮಾಪತಿ ನಮ್ಮ ಜೊತೆಗೆ ಇರುವುದರಿಂದ ಅವರ ಮೇಲೆ ಈಗಲೂ ಅನುಮಾನವಿಲ್ಲ ಎಂದು ದರ್ಶನ್ ಸ್ಪಷ್ಟಪಡಿಸಿದರು.