ಮಗಳು ಪ್ರಿಯಕರ ಜೊತೆ ಪರಾರಿಯಾಗಿದ್ದರಿಂದ ನೊಂದ ಊರಿಗೆ ನ್ಯಾಯ ಪಂಚಾಯ್ತಿ ಮಾಡುತ್ತಿದ್ದ ತಂದೆ ಪತ್ನಿ ಜೊತೆಗೂಡಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತೆಂಕಣಪಾಳ್ಯ ಗ್ರಾಮದಲ್ಲಿ ನಡೆದಿದೆ.
50 ವರ್ಷದ ರಮೇಶ್ ಹಾಗೂ 42 ವರ್ಷದ ಶೈಲಜಾ ಮಂಗಳವಾರ ಮುಂಜಾನೆ ತೋಟದಲ್ಲಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗಳು ಶಿಲ್ಪಾ ಹೆತ್ತವರನ್ನು ತೊರೆದು ಪುನೀತ್ ಎಂಬಾತನನ್ನು ಮದುವೆಯಾಗಿದ್ದಳು. ಹಲವು ಬಾರಿ ಇದೇ ವಿಚಾರಕ್ಕೆ ಮನೆಯಲ್ಲಿಯೂ ಸಣ್ಣ ಪುಟ್ಟ ಗಲಾಟೆ ನಡೆದಿತ್ತು. ಮನಸು ಬದಲಿಸಿಕೊಂಡಿದ್ದೇನೆ ಎಂದು ಹೇಳಿದ್ದ ಮಗಳು ಏಕಾಏಕಿ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ರಮೇಶ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಹಲವು ಬಾರಿ ಗ್ರಾಮ ಪಂಚಾಯ್ತಿ ಸದಸ್ಯನಾಗಿಯೂ ಆಯ್ಕೆಯಾಗಿದ್ದರು. ಈ ಕಾರಣಕ್ಕಾಗಿ ಗ್ರಾಮದಲ್ಲಿ ಸಣ್ಣ ಪುಟ್ಟ ಗಲಾಟೆ ನಡೆದ ಸಂದರ್ಭದಲ್ಲಿ ರಮೇಶ್ ನ್ಯಾಯ ಪಂಚಾಯ್ತಿ ಮಾಡುತ್ತಿದ್ದರು. ಮಗಳು ತಪ್ಪು ಮಾಡಿದ್ದಾಳೆ ಇನ್ನು ಮುಂದೆ ಯಾರಿಗೆ ನ್ಯಾಯ ಹೇಳಲಿ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ವಿಚಾರ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಪೊಲೀಸರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೃತದೇಹವನ್ನ ಶವ ಪರೀಕ್ಷೆಗೆ ಕಳುಸಿಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಎಂ.ಕೆ ದೊಡ್ಡಿ ಠಾಣಾ ಪೊಲೀಸರು ಪ್ರಕರಣ ಸಂಬಂಧ ತನಿಖೆ ಮುಂದುವರೆಸಿದ್ದಾರೆ.