ಟೆಕ್ಸಾಸ್: ಫೋರ್ಟ್ ವರ್ತ್ ನಗರದ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ 6 ಜನ ಮೃತರಾಗಿದ್ದು, 40ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ 100ಕ್ಕೂ ಅಧಿಕ ಕಾರುಗಳು ಜಖಂಗೊಂಡಿವೆ. ಇಲ್ಲಿನ ಫ್ರೀವೇನಲ್ಲಿ ಅಮೆರಿಕ ಕಾಲಮಾನ ಬೆಳಗ್ಗೆ 6ಗಂಟೆಗೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಣ್ಣ ಕಾರುಗಳು, ಎಸ್ ಯು ವಿ ಮತ್ತು ಭಾರೀ ಟ್ರಕ್ ಗಳ ನಡುವೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಅಪಘಾತ ನಡೆದ ಸ್ಥಳದಲ್ಲಿ 20ಕ್ಕೂ ಹೆಚ್ಚು ಅಗ್ನಿಶಾಮಕದಳದ ವಾಹನಗಳು ಸೇರಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ಭಾಗದಲ್ಲಿ ಹಿಮ ಬಿದ್ದಿದ್ದರಿಂದ ರಸ್ತೆಗಳು ಜಾರುತ್ತವೆ. ಅಲ್ಲದೇ ಬೆಳಗಿನ ಜಾವ ಭಾರೀ ಪ್ರಮಾಣದಲ್ಲಿ ಮಂಜು ಬಿದ್ದಿದ್ದರಿಂದ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಗಂಭೀರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದವರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ತಲುಪಿಸಲಾಗಿದೆ. ಇನ್ನೂ ಕೆಲವರು ಕಾರುಗಳಲ್ಲಿ ಸಿಲುಕಿರುವ ಸಂಭವವಿದೆ ಎನ್ನಲಾಗಿದೆ. ಈ ಅಪಘಾತದಿಂದಾಗಿರುವ ನಷ್ಟವನ್ನು ನೋಡಿ ನನ್ನ ಹೃದಯ ಮಿಡಿಯುತ್ತಿದೆ. ಇವರಿಗೆ ನೆರವಿನ ಹಸ್ತ ಚಾಚಲು ನಾವು ಸದಾ ಸಿದ್ಧ. ಅಪಘಾತದಲ್ಲಿ ಮೃತರಾದವರ ಮತ್ತು ಗಾಯಗೊಂಡಿರುವರಿಗೆ ನಿಮ್ಮ ಪ್ರಾರ್ಥನೆ ಇರಲಿ ಎಂದು ಫೋರ್ಟ್ ವರ್ತ್ ಮೇಯರ್ ಬೆಟ್ಸಿ ಟ್ವೀಟ್ ಮಾಡಿದ್ದಾರೆ.