ರೈತರ ಪ್ರತಿಭಟನೆ ತಡೆಯಲು ಪೊಲೀಸರ ಹರಸಾಹಸ

ನವದೆಹಲಿ: ಕೇಂದ್ರದ ಕೃಷಿ ಮಸೂದೆ ಜಾರಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಪರಿಸ್ಥಿತಿ ನಿಯಂತ್ರಣ ತರಲು ದೆಹಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ದೆಹಲಿಯ ಸಿಂಘು, ಟಕ್ರಿ ಹಾಗೂ ಗಾಜೀಪುರ ಗಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವ ರೈತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ರಸ್ತೆಗಳನ್ನು ಅಗೆದು ಸಿಮೆಂಟ್, ಗ್ರಿಲ್ ಹಾಕುವ ಮೂಲಕ ತಡೆ ಗೋಡೆಗಳನ್ನು ನಿರ್ಮಿಸಿ, ಬ್ಯಾರಿಕೇಡ್ ಗಳನ್ನು ಇರಿಸಲಾಗಿದೆ. ಈ ಮೂಲಕ ರೈತರು ದೆಹಲಿ ತಲುಪದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.
ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ಬಳಿಕ ದೆಹಲಿ ಪ್ರತಿಭಟನೆಯನ್ನು ರೈತರು ಮತ್ತಷ್ಟು ತೀವ್ರಗೊಳಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಇಲಾಖೆ ಅನೇಕ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ಉತ್ತರಪ್ರದೇಶ, ಹರಿಯಾಣದ ಗಡಿಯಲ್ಲಿ ಅಕ್ಷರಶಃ ಪೊಲೀಸ್ ಸರ್ಪಗಾವಲಿನಿಂದ ಭದ್ರಕೋಟೆ ನಿಮಾರ್ಣ ಮಾಡಿದೆ.