ದೆಹಲಿ : ಪ್ರತಿಭಟನೆಯ ಹೆಸರಲ್ಲಿ ಗಣರಾಜ್ಯೋತ್ಸದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡಲು ದೆಹಲಿ ಹೈಕೋರ್ಟ್ ಸಾಧ್ಯವಿಲ್ಲ ಎಂದಿದೆ. ಹೋರಾಟದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಎಫ್‌ಐಆರ್ ಮತ್ತು ತನಿಖೆಯ ಅರ್ಹತೆ ಪರಿಶೀಲಿಸದೇ ಬಂಧಿತರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದಿದೆ.
ಪ್ರತಿಭಟನಾಕಾರರ ವಿರುದ್ಧ ದಾಖಲಾದ ಎಫ್‌ಐಆರ್‌ಗಳ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠ, ಎಫ್‌ಐಆರ್ ಮತ್ತು ತನಿಖೆಯ ಅರ್ಹತೆಗಳನ್ನು ನಮೂದಿಸದೆ ಬಂಧಿತರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂದು ತೋರುತ್ತದೆ ಎಂದು ಅರ್ಜಿಯನ್ನು ವಜಾಗೊಳಿಸುವ ಮುನ್ನ ನ್ಯಾಯಾಧೀಶರು ತಿಳಿಸಿದ್ದಾರೆ.
ಬಂಧಿಸಲ್ಪಟ್ಟ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಪೊಲೀಸರು ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ. 24 ಗಂಟೆಗಳ ಒಳಗೆ ಬಂಧಿತ ವ್ಯಕ್ತಿಗಳನ್ನು ಹತ್ತಿರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಇದಕ್ಕೂ ಮೊದಲು, ಅರ್ಜಿದಾರ ಹರ್ಮನ್ ಪ್ರೀತ್ ಸಿಂಗ್ ಅವರನ್ನು ಪ್ರತಿನಿಧಿಸಿದ ವಕೀಲ ಅಶಿಮಾ ಮಾಂಡ್ಲಾ, ದೆಹಲಿ ಪೊಲೀಸರು ಸೋಮವಾರ ನೀಡಿದ ಹೇಳಿಕೆಯ ಪ್ರಕಾರ, 122 ಜನರನ್ನು ಬಂಧಿಸಲಾಗಿದೆ ಮತ್ತು 44 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಅರ್ಜಿಯಲ್ಲಿ ಸಿಂಗ್, ತುರ್ತು ಪರಿಸ್ಥಿತಿಗಳಲ್ಲಿಯೂ ಸ್ವಾತಂತ್ರ್ಯದ ಕಲ್ಪನೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಮತ್ತು ರೈತರ ಟ್ರಾಕ್ಟರ್ ರ್ಯಾಲಿ ಸಮಯದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಆದರೆ, ಇದು ಅರ್ಜಿದಾರರಿಗೆ ಸಂಬಂಧಿಸಿದ ವಿಷಯವಲ್ಲ ಮತ್ತು ಪ್ರಕರಣದಲ್ಲಿ ನೋಟಿಸ್ ಕೂಡ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಜನವರಿ 26 ರ ನಂತರ ಕಾಣೆಯಾದವರು ಎಂದು ಹೇಳಲಾದ ವ್ಯಕ್ತಿಗಳ ಬಗ್ಗೆ, ಅರ್ಜಿದಾರರು ಅವರ ಯಾವುದೇ ಸಂಬಂಧಿಕರನ್ನು ಸಂಪರ್ಕಿಸಿಲ್ಲ. ಅವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಹೊರಗೆ ಹೋಗಿರಬಹುದು. ರಿಟ್ ಅರ್ಜಿಯನ್ನು ಪುರಸ್ಕರಿಸಲು ನಮಗೆ ಯಾವುದೇ ಕಾರಣ ಕಾಣುತ್ತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಗಣರಾಜ್ಯೋತ್ಸವದಂದು ಕಿಸಾನ್ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 70 ಮತ್ತು 80ರ ವಯಸ್ಸಿನ ವ್ಯಕ್ತಿಗಳು ಸೇರಿದಂತೆ 122 ಜನರನ್ನು ಬಂಧಿಸಿದ್ದಾರೆ. ಇನ್ನೂ ಆರು ಹೊಸ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಸೋಮವಾರ, ದೆಹಲಿ ಪೊಲೀಸ್ ವಕ್ತಾರ ಡಾ.ಈಶ್ ಸಿಂಘಾಲ್, ಈ ವರೆಗೆ 44 ಎಫ್‌ಐಆರ್ ದಾಖಲಿಸಲಾಗಿದೆ ಮತ್ತು 122 ಜನರನ್ನು ಬಂಧಿಸಲಾಗಿದೆ. 54 ರೈತ ಮುಖಂಡರು ಮತ್ತು 200 ಟ್ರಾಕ್ಟರುಗಳ ಮಾಲೀಕರಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ರ್ಯಾಕ್ಟರ್ ಮಾಲೀಕರಿಗೆ ವಿಚಾರಣೆಗೆ ಬರಲು ಸಮನ್ಸ್ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.