ಮಂಗಳೂರು ದಕ್ಷಿಣ ಕನ್ನಡ. ಕೇರಳದಲ್ಲಿ ಕೋವಿಡ್ ಪ್ರಮಾಣವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಕೆಲ ಗಡಿ ಬಂದ್ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ತಲಪಾಡಿ, ಬಂಟ್ವಾಳದ ಸಾರಡ್ಕ, ಪುತ್ತೂರಿನ ನೆಟ್ಟಣಿಗೆ ಮುಡ್ನೂರು, ಸುಳ್ಯದ ಮೇಣಾಲ ಮತ್ತು ಜಾಲ್ಸೂರು ಹೊರತುಪಡಿಸಿ ಉಳಿದೆಲ್ಲ ಕೇರಳ ಜೊತೆಗಿನ ಅಂತರರಾಜ್ಯ ಗಡಿ ಸಂಚಾರವನ್ನು ಮುಚ್ಚುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಆದೇಶಿಸಿದ್ದಾರೆ.
ಈ ಗಡಿಗಳಲ್ಲಿ ಚೆಕ್‌ಪೋಸ್ಟ್ ಹಾಕಿ ಆರೋಗ್ಯ ಇಲಾಖೆಯಿಂದ ತಂಡ ನಿಯೋಜಿಸಬೇಕು. ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ಪ್ರತಿಯೊಬ್ಬರು 72 ಗಂಟೆಯೊಳಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು. ಆರ್‌ಎಟಿ ಪರೀಕ್ಷಾ ವರದಿಯನ್ನು ಮಾನ್ಯ ಮಾಡುವುದಿಲ್ಲ. ಪ್ರತಿ ಪ್ರಯಾಣಿಕರನ್ನು ನೋಂದಾಯಿಸಲಾಗುತ್ತದೆ. ಮಾಸ್ಕ್ ಧಾರಣೆ, ಅಂತರ ಪಾಲನೆಗಳು ಕಡ್ಡಾಯವಾಗಿವೆ. ಪ್ರಯಾಣಿಕರು ಆರ್‌ಟಿಪಿಸಿಆರ್ ವರದಿ ಹೊಂದಿರುವ ಬಗ್ಗೆ ನಿರ್ವಾಹಕರು ನಿಗಾ ವಹಿಸಬೇಕು. ಆದರೆ, ತುರ್ತು ಚಿಕಿತ್ಸೆಗೆ ಬಂದ ಆಂಬುಲೆನ್ಸ್‌ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ, ಆಸ್ಪತ್ರೆಗೆ ದಾಖಲಿಸಿದ ಬಳಿಕ ರೋಗಿಯೊಂದಿಗೆ ಸಹವರ್ತಿಗಳ ಪರೀಕ್ಷೆಯೂ ಕಡ್ಡಾಯವಾಗಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆ ಹಾಗೂ ವಸತಿ ನಿಲಯಗಳಲ್ಲಿ ಕೇರಳದಿಂದ ಬಂದವರಿಂದ ಕಡ್ಡಾಯವಾಗಿ 72 ಗಂಟೆಯೊಳಗಿನ ಆರ್‌ಟಿಪಿಸಿಆರ್ ಪಡೆಯಬೇಕು. ಕೇರಳದಿಂದ ಪ್ರತಿನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು 15 ದಿನಗಳಿಗೊಮ್ಮೆ ಪರೀಕ್ಷಾ ವರದಿ ಹಾಜರು ಪಡಿಸಬೇಕು. ವಸತಿ ನಿಲಯಗಳಲ್ಲಿ ಸಾಕಷ್ಟು ಅಂತರ ಕಾಪಾಡಿಕೊಳ್ಳಬೇಕು. ಹೊರಗಿನ ಯಾವುದೇ ವ್ಯಕ್ತಿಗಳನ್ನು ವಸತಿ ನಿಲಯಕ್ಕೆ ಬಿಡಬಾರದು. ನಿಯಮ ಉಲ್ಲಂಘಿಸಿದಲ್ಲಿ ಸಂಸ್ಥೆಯ ಮೇಲ್ವಿಚಾರಕರನ್ನು ಜವಾಬ್ದಾರಿ ಮಾಡಲಾಗುವುದು.
ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿ ತಾಲ್ಲೂಕು ಕೇಂದ್ರಗಳಲ್ಲೂ ಒಂದು ಕ್ವಾರಂಟೈನ್ ಕೇಂದ್ರ ತೆರೆಯಲು ಸಿದ್ಧತೆ ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.