ಕರ್ನಾಟಕದ ಹಿಜಾಬ್ ವಿವಾದ ಕುರಿತಂತೆ ಇಂದು ಅಂತಿಮ ತೀರ್ಪು ಹೊರಬಿದ್ದಿದೆ. ಶಿಕ್ಷಣ ಸಂಸ್ಥೆಗಳಿಗೆ ಹಿಜಾಬ್ ಧರಿಸಿ ಹೋಗುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಜಮ್ಮು-ಕಾಶ್ಮೀರದ ಪಿಡಿಪಿ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಪಾರ್ಟಿಯ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ತೀರ್ಪು ಹೊರಬಿದ್ದ ಬೆನ್ನಲ್ಲೇ ಟ್ವೀಟ್ ಮಾಡಿದ ಮೆಹಬೂಬಾ ಮುಫ್ತಿ, ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪು ನಿಜಕ್ಕೂ ನಿರಾಸೆ ಮೂಡಿಸಿದೆ. ಒಂದೆಡೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಲಾಗುತ್ತಿದೆ, ಅದೇ ಇನ್ನೊಂದು ಕಡೆಯಲ್ಲಿ ಅವರ ಹಕ್ಕು, ಆಯ್ಕೆಯನ್ನು ನೆರವೇರಿಸಿಕೊಳ್ಳಲು ನಿರಾಕರಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹಿಜಾಬ್ ಎಂಬುದು ಕೇವಲ ಧಾರ್ಮಿಕತೆಗೆ ಸಂಬಂಧಪಟ್ಟ ವಿಚಾರವಲ್ಲ. ಇದು ಆಯ್ಕೆ ಸ್ವಾತಂತ್ರ್ಯದ ಅಂಶವೂ ಹೌದು ಎಂದು ಹೇಳಿದ್ದಾರೆ. ಈ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಆಯ್ಕೆ ಹಕ್ಕನ್ನು ದಮನ ಮಾಡಲಾಗಿದೆ ಎಂದು ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ, ಹಿಜಾಬ್ಗೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್ ವರದಿ ತೀವ್ರ ನಿರಾಸೆ ಮೂಡಿಸಿದೆ. ಹಿಜಾಬ್ ಎಂಬುದು ಒಂದು ಬಟ್ಟೆಯ ತುಂಡು ಎಂದು ಭಾವಿಸಬಹುದು. ಆದರೆ ಅದನ್ನು ಧರಿಸಲು ಮಹಿಳೆ ಇಷ್ಟಪಡುತ್ತಾಳೆ ಎಂದರೆ ಅದು ಆಕೆಯ ಆಯ್ಕೆಯಾಗಿರುತ್ತದೆ. ಇಂಥ ಒಂದು ಮೂಲಭೂತ ಹಕ್ಕನ್ನೂ ಕೋರ್ಟ್ ಎತ್ತಿ ಹಿಡಿಯದೆ ಇರುವುದು ನಿಜಕ್ಕೂ ಹಾಸ್ಯಾಸ್ಪದ ಎಂದಿದ್ದಾರೆ.