ನಿದ್ದೆ ಮಂಪರಿನಲ್ಲಿ ಏರಪಾಡ್ ನುಂಗಿದ ಭೂಪ: ವಿಚಿತ್ರ ಸಂಕಟ ಅನುಭವಿಸಿದ ವ್ಯಕ್ತಿ
ವಾಷಿಂಗ್ಟನ್: ಇಲ್ಲೊಬ್ಬ ವ್ಯಕ್ತಿ ನಿದ್ರೆಯ ಮಂಪರಿನಲ್ಲಿ ಏರ್ ಪಾಡನ್ನೇ ನುಂಗಿದ್ದಾನೆ. ಈ ವಿಲಕ್ಷಣ ಘಟನೆ ನಡೆದಿರುವುದು ಅಮೇರಿಕದ ಮ್ಯಾಸಚ್ಯುಸೇಟ್ಸ್ ನಲ್ಲಿ. ರಾತ್ರಿ ಹಾಡು ಕೇಳುತ್ತಾ ಮಲಗಿದ ಆ ವ್ಯಕ್ತಿ ಬೆಳಗ್ಗೆ ಏಳುವಷ್ಟರಲ್ಲಿ ವಿಚಿತ್ರ ಸಂಕಟವನ್ನು ಅನುಭವಿಸಿದ್ದರು. ಈ ಬಗ್ಗೆ ಬ್ರಾಡ್ಫೋರ್ಡ್ ಗೌಫಿಯರ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡು ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.
ಬೆಳಗ್ಗೆ ಎದ್ದ ತಕ್ಷಣದಿಂದಲೇ ವಿಚಿತ್ರ ಚಡಪಡಿಕೆ ನನ್ನನ್ನು ಬಾಧಿಸುತ್ತಿತ್ತು. ನೀರು ಕುಡಿಯಲೂ ಕಷ್ಟವಾಗುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಂಟಲು ಸಂಪೂರ್ಣವಾಗಿ ಒಣಗಿತ್ತು. ಆತಂಕದಲ್ಲಿಯೇ ವೈದ್ಯರನ್ನು ಕಾಣಲು ಹೋದಾಗ ನನಗೆ ಶಾಕಿಂಗ್ ಸುದ್ದಿ ಕಾದಿತ್ತು. ನನ್ನ ಅನ್ನನಾಳದಲ್ಲಿ ಏರ್ ಪಾಡ್ ಸಿಲುಕಿರುವುದನ್ನು ವೈದ್ಯರು ಪರೀಕ್ಷೆಯ ಮೂಲಕ ಖಚಿತಪಡಿಸಿದರು. ತಕ್ಷಣವೇ ವೈದ್ಯರು ಎಂಡೋಸ್ಕೋಪಿಯ ಮೂಲಕ ಅನ್ನನಾಳದಲ್ಲಿ ಸಿಲುಕಿದ್ದ ಏರ್ ಪಾಡ್ ನ್ನು ಹೊರತೆಗೆದಿದ್ದಾರೆ ಎಂದು ಗೌತಿಯರ್ ಬರೆದುಕೊಂಡಿದ್ದಾರೆ.
ನಿದ್ದೆಯ ಮಂಪರಿನಲ್ಲಿ ಆಕಸ್ಮಿಕವಾಗಿ ಏರ್ ಪಾಡ್ ನುಂಗಿದ್ದ ಗೌತಿಯರ್ ಚಡಪಡಿಕೆಗೊಳಗಾಗಿದ್ದರು. ಎದೆಯಲ್ಲೇನೋ ಸಂಕಟವಾಗುತ್ತಿದೆ ಎಂಬ ಚಡಪಡಿಕೆಯಲ್ಲಿಯೇ ಬೆಡ್ ಮೇಲೆ ಒಂದೇ ಏರ್ ಪಾಡ್ ಕಣ್ಣಿಗೆ ಬಿದ್ದಿತ್ತು. ಇನ್ನೊಂದು ಏರ್ ಪಾಡ್ ನ್ನು ಎಷ್ಟು ಹುಡುಕಿದರೂ ಸಿಗಲಿಲ್ಲ. ಆಗ ಅವರ ಹೆಂಡತಿ ನೀವು ಏರ್ ಪಾಡ್ ನ್ನು ನುಂಗಿರಬಹುದು ಎಂದು ತಮಾಷೆ ಮಾಡಿದ್ದರಂತೆ.