ಎಟಿಎಂ ಹಣ ದೋಚಿ ಚಾಲಕ ಪರಾರಿ ಪ್ರಕರಣ: ಪೊಲೀಸರ ಬಳಿ ಶಾಕಿಂಗ್ ಮಾಹಿತಿ

ಬೆಂಗಳೂರು: ಎಟಿಎಂಗೆ ತುಂಬಲು ತಂದಿದ್ದ ಹಣ ದೋಚಿ ಎಟಿಎಂ ವಾಹನದ ಚಾಲಕ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. 64 ಲಕ್ಷ ರೂ. ಹಣ ದೋಚಿ ಅತ್ತೆ ಮಗಳೊಂದಿಗೆ ಪರಾರಿಯಾಗಿದ್ದ ಚಾಲಕ ಯೋಗೇಶ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿತ್ತು. ಒಟ್ಟು 64 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ಯೋಗೇಶ್ ಬಳಿ ಸದ್ಯ ಉಳಿದಿರುವುದು ಕೇವಲ 15 ಸಾವಿರ ರೂ. ಎಂಬ ಮಾಹಿತಿ ಪೊಲೀಸರಿಗೆ ತನಿಖೆಯ ವೇಳೆ ತಿಳಿದುಬಂದಿದೆ. ಮಿಕ್ಕ ಹಣ ಏನಾಯಿತು ಎಂಬುದರ ಬಗ್ಗೆ ಚಾಲಕ ಬಾಯಿ ಬಿಡುತ್ತಿಲ್ಲ, ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಗೆ ಸೇರಿದ ವಾಹನದಲ್ಲಿ ಆ್ಯಕ್ಸಿಸ್ ಬ್ಯಾಂಕ್ ಎಟಿಎಂಗೆ ತುಂಬಲು ಹಣ ತಂದಿದ್ದ ವೇಳೆ ಚಾಲಕ ಯೋಗೇಶ್ ಹಣದೊಂದಿಗೆ ಪರಾರಿಯಾಗಿದ್ದ. ಆರೋಪಿ ಯೋಗೇಶ್ ಮಂಡ್ಯ ಜಿಲ್ಲೆಯ ಬೂಕನಕೆರೆಯವನು. ಕಳ್ಳತನಕ್ಕೆ ಮೊದಲೇ ಪ್ಲಾನ್ ಮಾಡಿಕೊಂಡು ತಯಾರಿ ನಡೆಸಿದ್ದ ಎನ್ನಲಾಗಿದೆ. ಹಣ ದೋಚಿ ಆಟೋದಲ್ಲಿ ತೆರಳಿದ್ದ ಯೋಗೇಶ್ ಸ್ವಲ್ಪ ದೂರ ತೆರಳಿ ಅದೇ ಆಟೋದಲ್ಲಿ ಅತ್ತೆಯ ಮಗಳನ್ನು ಹತ್ತಿಸಿಕೊಂಡು ಪರಾರಿಯಾಗಿದ್ದ.
ಗಂಡನನ್ನು ಬಿಟ್ಟಿದ್ದ ಅತ್ತೆಯ ಮಗಳೊಂದಿಗೆ ಯೋಗೇಶ್ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಯೋಗೇಶ್ ಈಗಾಗಲೇ ಎರಡು ಮಕ್ಕಳ ತಂದೆಯಾಗಿದ್ದು, ಅತ್ತೆಯ ಮಗಳೊಂದಿಗೆ ಸಂಸಾರ ಆರಂಭಿಸಲು ಈ ಕೃತ್ಯ ಎಸಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಕಳ್ಳತನದ ಬಳಿಕ ಯೋಗೇಶ್ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಆದರೆ ಮೈಸೂರಿನಲ್ಲಿರುವ ತನ್ನ ಸ್ನೇಹಿತರೊಂದಿಗೆ ಆತ ಸಂಪರ್ಕದಲ್ಲಿದ್ದ. ಈ ಸುಳಿವು ಆಧರಿಸಿ ಪೊಲೀಸರು ಮೈಸೂರಿನಲ್ಲಿ ಯೋಗೇಶ್ ನನ್ನು ಬಂಧಿಸಿದ್ದರು.