ಬೆಂಗಳೂರು : ಪತ್ರಕರ್ತ, ಹಿರಿಯ ನಟ ಸುರೇಶ್ ಚಂದ್ರ ಅವರು ಕೊರೊನಾಗೆ ಇಂದು ಬಲಿಯಾಗಿದ್ದಾರೆ. ಸುರೇಶ್ ಚಂದ್ರ ಅವರಿಗೆ ಇತ್ತೀಚಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಕೆಲವು ದಿನಗಳ ಹಿಂದೆ ಅವರನ್ನು ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ನಿಧನ ಹೊಂದಿದ್ದಾರೆ.
ಗಣೇಶ್ ನಟನೆಯ ಚೆಲುವಿನ ಚಿತ್ತಾರ ಸಿನಿಮಾದಿಂದ ಹೆಚ್ಚು ಖ್ಯಾತಿಗೆ ಬಂದಿದ್ದ ಸುರೇಶ್ ಚಂದ್ರ, ಅವರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದರು. ಹಲವಾರು ವರ್ಷಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುರೇಶ್ ಚಂದ್ರ ಅವರಿಗೆ ಶಂಕರ್ ನಾಗ್, ಅಂಬರೀಷ್, ವಿಷ್ಣುವರ್ಧನ್ ಸೇರಿದಂತೆ ಹಲವಾರು ಹಿರಿಯ ನಟರೊಂದಿಗೆ ಉತ್ತಮ ಸಂಬಂಧವಿತ್ತು. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಸಂಜೆವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಚಂದ್ರ ಅವರು ಕಳೆದ ವರ್ಷವಷ್ಟೆ ನಿವೃತ್ತರಾಗಿದ್ದರು. ನಾಟಕ, ಸಾಹಿತ್ಯ ಹಾಗೂ ಭಾವಗೀತೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.
ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ವಾಸವಿದ್ದ ಸುರೇಶ್ ಚಂದ್ರ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಅವರ ಹಳ್ಳಿ ಮಧುಗಿರಿ ತಾಲ್ಲೂಕಿನ ಲಿಂಗೇನಹಳ್ಳಿಯಲ್ಲಿ ನಡೆಯಲಿದೆ.