ನೀರು ಕುಡಿಯಲು ಹೋದ ಎತ್ತುಗಳು ಕೆರೆಯಲ್ಲಿ ಸಾವು:

ದಾವಣಗೆರೆ: ಕೆರೆಗೆ ನೀರು ಕುಡಿಯಲು ಹೋದು ಎತ್ತುಗಳು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಕತ್ತಿಗೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಎರೆಹಳ್ಳೇರ ಮಹಾಲಿಂಗಪ್ಪ ಅವರಿಗೆ ಸೇರಿದ 1ಲಕ್ಷ 20 ಸಾವಿರ ಮೌಲ್ಯದ ಎತ್ತುಗಳು ಸಾವನ್ನಪ್ಪಿದ್ದು, ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ದಾರಿಯಲ್ಲಿ ಸಿಗುವ ಕೆರೆಯಲ್ಲಿ ಎತ್ತುಗಳು ನೀರು ಕುಡಿಯಲು ಹೋಗಿದ್ದವು. ಬಿಸಿಲಿನ ಬೇಗೆಯಿಂದ ಬಳಲಿದ್ದ ಎತ್ತುಗಳು ಕೆರೆಯ ನೀರಿನಲ್ಲಿ ಈಜುತ್ತ ಹೆಚ್ಚಿನ ನೀರು ಸಂಗ್ರಹಗೊಂಡಿರುವ ಕೆರೆಯ ಮಧ್ಯ ಭಾಗಕ್ಕೆ ಹೋಗಿದ್ದವು.
ಹೆಚ್ಚು ನೀರು ಕುಡಿದ ಕಾರಣ ಎತ್ತುಗಳು ಈಜಲು ಆಗದಂಥ ಸ್ಥಿತಿ ತಲುಪಿದವು ಎನ್ನಲಾಗಿದೆ. ಬಹಳ ಹೊತ್ತಾದರೂ ಎತ್ತುಗಳು ನೀರಿನಿಂದ ಹೊರಗೆ ಬಾರದಿದ್ದುದನ್ನು ಗಮನಿಸಿದ ಎತ್ತುಗಳ ಮಾಲೀಕ ಎರೆಹಳ್ಳೇರ ಮಹಾಲಿಂಗಪ್ಪ ಹಾಗೂ ಗ್ರಾಮದ ಜನರು ಎತ್ತುಗಳನ್ನು ರಕ್ಷಿಸಲು ಎಷ್ಟೇ ಯತ್ನಿಸಿದರೂ ಅವುಗಳು ಬದುಕುಳಿಯಲಿಲ್ಲ. ಸ್ಥಳಕ್ಕೆ ಪಶು ಚಿಕಿತ್ಸಾಲಯದ ಪಶು ವೈದ್ಯ ಡಾ. ಹರೀಶ್ ಎತ್ತುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಸದ್ಯ ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.